×
Ad

ಸುಳ್ಯ: ಕದಿಕಡ್ಕ ಶಾಲೆಯ ಎದುರು ಪೋಷಕರ, ವಿದ್ಯಾರ್ಥಿಗಳ ಧರಣಿ

Update: 2016-07-23 18:16 IST

ಸುಳ್ಯ, ಜು.23: ಜಾಲ್ಸೂರು ಗ್ರಾಮದ ಕದಿಕಡ್ಕ ಶಾಲೆಯ ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಶಾಲೆ ಎದುರು ಶನಿವಾರ ಧರಣಿ ನಡೆಯಿತು.

ಹೆಚ್ಚುವರಿ ಶಿಕ್ಷಕರೆಂಬ ನೆಲೆಯಲ್ಲಿ ಶಾಲೆಯ ಇಬ್ಬರು ಶಿಕ್ಷಕರಾದ ಉದಯಕುಮಾರ್ ಅವರಿಗೆ ಗುತ್ತಿಗಾರಿನ ಮೊಗ್ರ ಶಾಲೆಗೆ ಹಾಗೂ ಪುಷ್ಪಲತಾ ಅವರಿಗೆ ಎಣ್ಮೂರು ಶಾಲೆಗೆ ವರ್ಗಾವಣೆ ಆದೇಶ ಪತ್ರ ಬಂದಿದ್ದು ಕದಿಕಡ್ಕ ಶಾಲೆಯಿಂದ ಬಿಡುಗಡೆ ಹೊಂದಲು ಶಿಕ್ಷಣಾಧಿಕಾರಿ ಸೂಚಿಸಿದ್ದರು. ಆದರೆ ಕದಿಕಡ್ಕ ಶಾಲೆಯಲ್ಲಿ ಇದೀಗ 1ರಿಂದ 7ನೆ ತರಗತಿಗಳಲ್ಲಿ ಒಟ್ಟು 101 ಮಂದಿ ವಿದ್ಯಾರ್ಥಿಗಳಿದ್ದು ಓರ್ವ ದೈಹಿಕ ಶಿಕ್ಷಣ ಶಿಕ್ಷಕಿ ಸೇರಿ ಕೇವಲ 5 ಮಂದಿ ಶಿಕ್ಷಕರಿದ್ದು ಹಿಂದಿ ಹಾಗೂ ವಿಜ್ಞಾನ ಶಿಕ್ಷಕರನ್ನು ವರ್ಗಾವಣೆಗೊಳಿಸಿದರೆ ಕನ್ನಡ, ದೈಹಿಕ ಶಿಕ್ಷಣ ಶಿಕ್ಷಕರು, ಮುಖ್ಯೋಪಾಧ್ಯಾಯರು ಸೇರಿದಂತೆ ಕೇವಲ ಮೂವರು ಶಿಕ್ಷಕರು ಇರಬೇಕಾಗುತ್ತದೆ. ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ಕನಕಮಜಲು ಸೊಸೈಟಿಯ ಜಾಲ್ಸೂರು ಶಾಖೆಯ ಬಳಿಯಿರುವ ಶಾಲಾ ಗೇಟಿಗೆ ಬೀಗ ಜಡಿದು ಧರಣಿ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕೆ.ಎಂ.ಬಾಬು, ಸುಳ್ಯ ತಾಲೂಕಿನ ಒಟ್ಟು 18 ಶಾಲೆಗಳಲ್ಲಿ ಈ ರೀತಿ ಶಿಕ್ಷಕರನ್ನು ವರ್ಗಾವಣೆಗೊಳಿಸಲಾಗಿದೆ. ನಮ್ಮ ಶಾಲೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಕಲಿಕೆಯ ವಿಷಯಗಳಾದ ವಿಜ್ಞಾನ, ಗಣಿತ, ಹಿಂದಿ ಭಾಷಾ ಶಿಕ್ಷಕರನ್ನು ವರ್ಗಾವಣೆಗೊಳಿಸಿ ಶಾಶ್ವತವಾಗಿ ಹಿಂದಿ, ವಿಜ್ಞಾನ-ಗಣಿತ ಶಿಕ್ಷಕರು ಬಾರದ ಹಾಗೆ ವಾಡಲಾಗಿದೆ. ಅದೆಷ್ಟೋ ಶಾಲೆಗಳಲ್ಲಿ ಹಿಂದಿ, ವಿಜ್ಞಾನ, ಗಣಿತ ಶಿಕ್ಷಕರ ಕೊರತೆಯಿದೆ. ಆದರೆ ಸರಕಾರ ಅಂತಹ ಕಡೆಗೆ ಹೊಸ ಶಿಕ್ಷಕರನ್ನು ನೇಮಿಸಬೇಕೆ ಹೊರತು ಬೇರೆ ಶಾಲೆಯಿಂದ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು. ಶಾಲಾ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜ ಬಿಇಒ ಕೆಂಪಲಿಂಗಪ್ಪರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ನೀವು ಬಿಇಒ. ಕಚೇರಿಗೆ ಬಂದು ಮಾಹಿತಿ ಕೊಡಿ ಎಂದು ಹೇಳಿದರೆನ್ನಲಾಗಿದೆ. ಆದರೆ ಮುಖ್ಯೋಪಾಧ್ಯಾಯರನ್ನು ಸ್ಥಳದಿಂದ ತೆರಳದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಊರವರು ತಿಳಿಸಿ ನೀವು ಹೋಗುವುದು ಬೇಡ ಅವರೇ ಇಲ್ಲಿಗೆ ಬರಲಿ ಎಂದು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಸಮನ್ವಯಾಧಿಕಾರಿ ವೀಣಾ ಹಾಗೂ ಸಿಆರ್‌ಪಿ ವಾಣಿ ಅವರು ಸರಕಾರದ ಆದೇಶದ ಪ್ರಕಾರ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು. ಆದರೆ ಬಾಬು ಕೆ.ಎಂ, ಮೊಯ್ದಿನ್, ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಚ್. ಅಬ್ದುಲ್ ಖಾದರ್ ಮತ್ತಿತರರು ಸ್ಥಳಕ್ಕೆ ಬಿಇಒ ಕೆಂಪಲಿಂಗಪ್ಪ ಬಂದು ಹೇಳಿಕೆ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರೆನ್ನಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಬಿಇಒ ಊರವರ ಆಕ್ರೋಶ ಎದುರಿಸಬೇಕಾಯಿತು. ಜುಲೈ 26ರಂದು ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಈ ಕುರಿತು ಮಾತುಕತೆ ನಡೆಸುವುದಾಗಿ ನಿರ್ಧಾರವಾದ ಮೇಲೆ ಧರಣಿಯನ್ನು ಹಿಂತೆಗೆದುಕೊಳ್ಳಲಾಯಿತು.

ಧರಣಿಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಚ್. ಅಬ್ದುಲ್ ಖಾದರ್, ಉಪಾಧ್ಯಕ್ಷೆ ವಿಜಯಾ, ಆಟೋರಿಕ್ಷಾ ಯೂನಿಯನ್ ಅಧ್ಯಕ್ಷ ರುನಾಥ ಕೆಮ್ಮನಬಳ್ಳಿ, ಸತೀಶ್ ಆಚಾರ್ಯ ಜಾಲ್ಸೂರು, ಭಾಸ್ಕರ ಬೈದರಕೊಳಂಜಿ, ಧನಂಜಯ ಬೆಳ್ಳಿಪ್ಪಾಡಿ, ಗ್ರಾ.ಪಂ. ಸದಸ್ಯ ದಯಾನಂದ ಮಹಾಬಲಡ್ಕ, ಮಾಜಿ ಗ್ರಾ.ಪಂ. ಸದಸ್ಯೆ ಸರಸ್ವತಿ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News