ಜು.24ರ ಮಧ್ಯರಾತ್ರಿಯಿಂದಲೇ ಕೆಎಸ್ಸಾರ್ಟಿಸಿ ನೌಕರರ ಮುಷ್ಕರ
ಪುತ್ತೂರು, ಜು.23: ಕೆಎಸ್ಸಾರ್ಟಿಸಿ ನಾಲ್ಕು ನಿಗಮಗಳ ಆಡಳಿತ ಮಂಡಳಿ ಮತ್ತು ಸರಕಾರ ಸೇರಿಕೊಂಡು ಸಾರಿಗೆ ನೌಕರರ ವೇತನವನ್ನು ಏಕಪಕ್ಷೀಯವಾಗಿ ಶೇ.8ರಷ್ಟು ಮಾತ್ರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಮತ್ತು ವೇತನವನ್ನು ಶೇ.35ರಷ್ಟು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಜ್ದೂರ್ ಸಂಘ ಒಕ್ಕೂಟವು ಜು.24ರಂದು ಮಧ್ಯ ರಾತ್ರಿಯಿಂದಲೇ ಆರಂಭಿಸಲುದ್ದೇಶಿಸಿರುವ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಬೆಂಬಲ ವ್ಯಕ್ತಪಡಿಸಿದೆ.
ಕೆಎಸ್ಸಾರ್ಟಿಸಿ ನೌಕರರ ಮುಷ್ಕರವನ್ನು ಸಿಐಟಿಯು ಸಂಯೋಚಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್‌ನ ಪುತ್ತೂರು ಘಟಕ ಬೆಂಬಲಿಸುವುದಾಗಿ ಸಿಪಿಎಂ ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ.ಸತೀಶನ್ ತಿಳಿಸಿದ್ದಾರೆ. ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಸಂಘಟನೆಯು ಕೂಡ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಜ್ದೂರ್ ಸಂಘ ಪುತ್ತೂರು ವಿಭಾಗದ ಪದಾಧಿಕಾರಿಗಳು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಜು.24ರಂದು ಮಧ್ಯರಾತ್ರಿಯಿಂದಲೇ ಕೆಎಸ್ಸಾರ್ಟಿಸಿ ನೌಕರರು ರಾಜ್ಯದಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಅಂದು ರಾತ್ರಿ ವೇಳೆ ಹೊರಡುವ ಬಸ್ಸುಗಳನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಅರ್ಧದಲ್ಲಿ ನಿಲುಗಡೆ ಮಾಡದೆ ನಿಗದಿತ ಸ್ಥಳಕ್ಕೆ ತಲುಪಿಸಲಾಗುವುದು. ನ್ಯಾಯ ಸಿಗುವ ತನಕ ಮುಷ್ಕರ ಮುಂದುವರಿಯುವುದು.
ಮುಷ್ಕರದಿಂದಾಗಿ ಸಾರ್ವಜನಿಕರಿಗಾಗುವ ಕಷ್ಟನಷ್ಟಗಳಿಗೆ ಸರಕಾರವೇ ನೇರ ಹೊಣೆ ಎಂದಿದ್ದರು. ಕೆಎಸ್ಸಾರ್ಟಿಸಿಯ ಎಲ್ಲಾ ನೌಕರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡುವಂತೆ ವಿನಂತಿಸಿಕೊಂಡಿದ್ದರು. ನೌಕರರ ವೇತನ ಹೆಚ್ಚಳದ ವಿಚಾರದಲ್ಲಿ ಸರಕಾರ ಮತ್ತು ಆಡಳಿತ ಮಂಡಳಿ ತನ್ನ ಪ್ರತಿಷ್ಠೆಯನ್ನು ಮರೆತು ಕಾರ್ಮಿಕರ ಸಮಸ್ಯೆಗಳ ವಾಸ್ತವಿಕ ವಿಚಾರದ ಬಗ್ಗೆ ಕೂಲಂಕುಷವಾಗಿ ವಿಮರ್ಶಿಸಬೇಕು. ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ವೇತನ ಪರಿಷ್ಕರಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಜ್ದೂರ್ ಸಂಘದ ಪುತ್ತೂರು ವಿಭಾಗದ ಅಧ್ಯಕ್ಷ ಗಿರೀಶ್ ಮಳಿ, ರಾಜ್ಯ ಕಾರ್ಯದರ್ಶಿ ವೆಂಕಟ್ರಮಣ ಟ್, ಮಂಗಳೂರು ವಿಭಾಗದ ಉಪಾಧ್ಯಕ್ಷ ಎ.ಸೇಸಪ್ಪ ಮೂಲ್ಯ, ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಶೇಖರ್, ಪುತ್ತೂರು ಘಟಕದ ಅಧ್ಯಕ್ಷ ವಿಶ್ವನಾಥ ರೈ ಮಾಡಾವು, ಪ್ರಧಾನ ಕಾರ್ಯದರ್ಶಿ ಸಂಜೀವ ಗೌಡ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಶಾಂತಾರಾಮ ವಿಟ್ಲ ಆಗ್ರಹಿಸಿದ್ದರು.