ಬಾಕಿಯಿರುವ ಪಡಿತರ ಅರ್ಜಿಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು: ಶಾಸಕ ಜೈನ್

Update: 2016-07-23 13:54 GMT

ಮಂಗಳೂರು, ಜು.23: ಬಾಕಿಯಿರುವ ಎಲ್ಲಾ ಪಡಿತರ ಅರ್ಜಿಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಮಾಜಿ ಸಚಿವ, ಶಾಸಕ ಕೆ.ಅಭಯಚಂದ್ರ ಜೈನ್ ಸೂಚಿಸಿದ್ದಾರೆ.

ನಗರದ ತಾಲೂಕು ಪಂಚಾಯತ್‌ನಲ್ಲಿ ಶನಿವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ಬಡ ವ್ಯಕ್ತಿಗೂ ಪಡಿತರ ಸೌಲಭ್ಯಗಳು ಸಿಗಬೇಕು. ನಿರ್ಗತಿಕರಿಗೆ ಈ ಸೌಲಭ್ಯ ದೊರೆಯಬೇಕೇ ಹೊರತು ಸ್ಥಿತಿವಂತರಿಗಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನ ಹರಿಸಿ ಕೆಲಸ ಮಾಡಬೇಕು. ಅರ್ಹರು ಯಾರೂ ಪಡಿತರ ಚೀಟಿ ಹಾಗೂ ಬಿಪಿಎಲ್ ಪಟ್ಟಿಯಿಂದ ವಂಚಿತರಾಗಬಾರದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ವಿನೋದ್ ಬೆಳ್ಳೂರು, ಪಡಿತರ ಚೀಟಿಗಾಗಿ ಅರ್ಜಿ ಹಾಕಿದವರಿಗೆ ಸರ್ವರ್ ಸಮಸ್ಯೆ ಎಂದು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಒಂದು ವರ್ಷದಿಂದ ಈ ರೀತಿ ವಿಲೇವಾರಿಯಾಗದೆ ಹಲವು ಅರ್ಜಿಗಳು ಬಾಕಿಯಾಗಿವೆ ಎಂದು ಆಪಾದಿಸಿದರು.

ಮಂಗಳೂರು ನಗರಪಾಲಿಕೆಯ ವ್ಯಾಪ್ತಿಯಿಂದ 10 ಕಿ.ಮೀ. ವ್ಯಾಪ್ತಿಯೊಳಗೆ ಹಾಗೂ ಪುರಸಭೆ ಮತ್ತು ನಗರಸಭೆಯಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ಬರ್ ರೆನ್ ಬರುವುದರಿಂದ ಈ ವ್ಯಾಪ್ತಿಯಲ್ಲಿ ಈಗಾಗಲೇ 94 ಸಿಗೆ ಅರ್ಜಿ ಸಲ್ಲಿಸಿದವರು ಆ. 27ರ ಒಳಗಾಗಿ ಪುನಃ 94 ಸಿಸಿಗೆ ಅರ್ಜಿ ಸಲ್ಲಿಸಬೇಕು ಎಂದು ಮೂಡಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಹೇಳಿದರು.

ಈ ವೇಳೆ ಮಾತನಾಡಿದ ಶಾಸಕರು ಸುಮಾರು 20 ವರ್ಷಗಳಿಂದ 94 ಸಿ ಹಾಗೂ 94ಸಿಸಿ ಸಮಸ್ಯೆಯಿದೆ. ಆದರೆ, ಬಡವರಿಗೆ ಮಾತ್ರ ಅವರು ವಾಸವಿರುವ ಸರಕಾರಿ ಜಾಗ ಅವರ ಹೆಸರಿಸಲ್ಲಾಗಬೇಕು ಎಂದರು.

ಅಕ್ಷರ ದಾಸೋಹ ಯೋಜನೆಯಡಿ ಒಟ್ಟು 42.66 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಎಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕ ಪ್ರಗತಿಯಡಿ 23.57 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಸ್ಪಂದಿಸಿದ ಶಾಸಕರು, ಮಕ್ಕಳಿಗೆ ವಿತರಿಸಲಾಗುವ ಅಕ್ಕಿಯನ್ನು ಪರಿಶೀಲಿಸಿದ ಬಳಿಕ ಶಾಲೆಗಳಿಗೆ ಪೂರೈಸಬೇಕು. ಹಳೆ ಸಂಗ್ರಹ ಅಕ್ಕಿಯನ್ನು ಮನೆಗಳಲ್ಲೂ ಬಳಸುವುದಿಲ್ಲ. ಇಂತಹ ಅಕ್ಕಿಯಿದ್ದರೆ ಶಾಲೆಗಳಿಗೆ ಪೂರೈಕೆ ಮಾಡುವುದು ಸರಿಯಲ್ಲ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಹೊಸ ಅಕ್ಕಿಯನ್ನೇ ಪೂರೈಸಬೇಕು ಎಂದರು.

ಮೂಡುಶೆಡ್ಡೆ ಸರಕಾರಿ ಶಾಲೆಯಿಂದ ಶಿಕ್ಷಕರ ವರ್ಗಾವಣೆ ಕುರಿತು ಅಧಿಕಾರಿಯೊಬ್ಬರು ಸಭೆಯಲ್ಲಿ ಮಂಡಿಸಿದಾಗ ಉತ್ತರಿಸಿದ ಅಭಯಚಂದ್ರ ಜೈನ್ ಅವರು, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, 245 ವಿದ್ಯಾರ್ಥಿಗಳ ಸಂಖ್ಯೆಯ ಮೂಡುಶೆಡ್ಡೆಯ ಶಾಲೆಯಲ್ಲಿ 4 ಮಂದಿ ಶಿಕ್ಷಕರಿದ್ದಾರೆ. ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳಿರುವ ಶಾಲೆಗೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಈ ಶಿಕ್ಷಕರನ್ನು ವರ್ಗಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಕೆಡಿಪಿ ಸಭೆಯಲ್ಲಾದ ನಿರ್ಣಯವನ್ನು ಸಂಬಂಧಪಟ್ಟವರು ಡಿಡಿಪಿಐ ಅವರಿಗೆ ತಿಳಿಸಲು ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕ ಮೊಯ್ದೀನ್ ಬಾವ, ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ, ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್, ಜಿ.ಪಂ. ಸದಸ್ಯರಾದ ಯು.ಪಿ. ಇಬ್ರಾಹಿಂ, ಜನಾರ್ದನ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News