×
Ad

ರಾಯಿ: ದೇವಸ್ಥಾನದಿಂದ ಆಭರಣ, ನಗದು ಕಳವು

Update: 2016-07-23 20:27 IST

ಬಂಟ್ವಾಳ, ಜು. 23: ಬಂಟ್ವಾಳ - ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಪೇಟೆ ಸಮೀಪದ ದೈಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಮುಂಜಾನೆ ನುಗ್ಗಿರುವ ಕಳ್ಳರು ಅಲ್ಲಿನ ಶಿವಲಿಂಗಕ್ಕೆ ಅಳವಡಿಸಿದ್ದ ಬೆಳ್ಳಿದೃಷ್ಟಿ ಮತ್ತು ಮೂರು ಕಾಣಿಕೆ ಡಬ್ಬಿಯ್ಲಿದ್ದ ಹಣವನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಇಲ್ಲಿನ ಪ್ರಧಾನ ಅರ್ಚಕ ಹರೀಶ ಟ್ ಎಂಬವರು ಶನಿವಾರ ಬೆಳಗ್ಗೆ ಸುಮಾರು ಐದೂವರೆ ಗಂಟೆಗೆ ಎಂದಿನಂತೆ ಪೂಜೆಗೆ ಬಂದಿದ್ದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ದೇವಳದ ಮಾಜಿ ಆಡಳಿತ ಮಂಡಳಿ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೇವಳದ ಸುತ್ತು ಗೋಪುರದ ಎದುರು ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಕಬ್ಬಿಣದ ರಾಡ್ ಬಳಸಿ ಚಿಲಕ ಸಹಿತ ಮುರಿದು ಕಳ್ಳರು ಒಳಪ್ರವೇಶಿಸಿರುವುದು ಕಂಡು ಬಂದಿದೆ. ಇಲ್ಲಿನ ಗರ್ಗುಡಿ ಬಾಗಿಲಿಗೆ ಅಳವಡಿಸಿದ್ದ ಸಂಕೋಲೆ ಸಹಿತ ಚಿಲಕವನ್ನು ಕೂಡಾ ಅದೇ ಮಾದರಿಯಲ್ಲಿ ಮುರಿದು ಬಳಿಕ ಶಿವಲಿಂಗದಿಂದ ಬೆಳ್ಳಿದೃಷ್ಟಿ ಕಳವುಗೈದು ಪರಾರಿಯಾಗಿದ್ದಾರೆ. ಹಿಂಬದಿಯಲ್ಲಿ ಇರುವ ಗಣಪತಿ ಮತ್ತು ಸುಬ್ರಹ್ಮಣ್ಯ ದೇವರ ಪ್ರತ್ಯೇಕ ಗುಡಿ ಬಾಗಿಲು ಮುಟ್ಟದೆ ಇಲ್ಲಿನ ಒಟ್ಟು ಮೂರು ಕಾಣಿಕೆ ಡಬ್ಬಿಗಳನ್ನು ಮಾತ್ರ ದೇವಸ್ಥಾನದ ಆವರಣದಲ್ಲೇ ಒಡೆದು ಸುಮಾರು ಆರು ಸಾವಿರ ರೂ. ಮೊತ್ತದ ಹಣ ಎಗರಿಸಿದ್ದಾರೆ.

ಇನ್ನೊಂದು ಖಾಲಿ ಕಾಣಿಕೆ ಡಬ್ಬಿ ದೇವಸ್ಥಾನದ ಎದುರಿನ ಗದ್ದೆ ಬದಿ ಕಾಲು ದಾರಿಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ಇನ್ಸ್‌ಪೆಕ್ಟರ್ ಬಿ.ಕೆ.ಮಂಜಯ, ಗ್ರಾಮಾಂತರ ಠಾಣಾಧಿಕಾರಿ ಎ.ಕೆ.ರಕ್ಷಿತ್, ಎಎಸೈ ರಮೇಶ್, ಸುರೇಶ್ ಕುಮಾರ್, ವಾಸು ನಾಯ್ಕ ಮತ್ತಿತರ ಪೊಲೀಸರ ತಂಡವು ಶನಿವಾರ ಬೆಳಗ್ಗೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News