ನಾಪತ್ತೆಯಾಗಿರುವ ವಾಯುಪಡೆ ವಿಮಾನದ ಪತ್ತೆಗೆ ಇಸ್ರೋದಿಂದ ಉಪಗ್ರಹ ಬಳಕೆ
ಚೆನ್ನೈ,ಜು.23: ಶುಕ್ರವಾರ ಬೆಳಿಗ್ಗೆ 29 ಯೋಧರನ್ನು ಹೊತ್ತುಕೊಂಡು ಚೆನ್ನೈನಿಂದ ಪೋರ್ಟ್‌ಬ್ಲೇರ್‌ಗೆ ಹಾರುತ್ತಿದ್ದಾಗ ನಿಗೂಢವಾಗಿ ನಾಪತ್ತೆಯಾಗಿರುವ ಭಾರತೀಯ ವಾಯುಪಡೆ(ಐಎಎಫ್)ಯ ಎಎನ್-32 ವಿಮಾನವನ್ನು ಪತ್ತೆ ಹಚ್ಚಲು ಇಸ್ರೋ ತನ್ನ ರಾಡಾರ್ ಇಮೇಜಿಂಗ್ ಉಪಗ್ರಹ(ರಿಸ್ಯಾಟ್)ವನ್ನು ಬಳಸಲಿದೆ.ಶನಿವಾರ ಸುದ್ದಿಸಂಸ್ಥೆಗೆ ಈ ವಿಷಯವನ್ನು ತಿಳಿಸಿದ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರು,ರಿಸ್ಯಾಟ್ ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ಚಿತ್ರಗಳನ್ನು ತೆಗೆಯಬಲ್ಲುದು. ಮೋಡಗಳ ಮರೆಯಿಂದಲೂ ನೋಡುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದರು.ಅಗತ್ಯ ಬಿದ್ದಲ್ಲಿ ಬೇರೊಂದು ಸ್ಥಳವನ್ನು ವೀಕ್ಷಿಸಲು ಇಸ್ರೋದ ಉಪಗ್ರಹಗಳನ್ನು ಸ್ವಲ್ಪ ಮಟ್ಟಿಗೆ ವಾಲಿಸಬಹುದಾಗಿದೆ ಎಂದರು.ರಿಸ್ಯಾಟ್ ಕ್ರಿಯಾಶೀಲ ಸೂಕ್ಷ್ಮತರಂಗ ದೂರ ಸಂವೇದಿ ವ್ಯವಸ್ಥೆಯನ್ನು ಹೊಂದಿದ್ದು, ಇದರ ಮೂಲಕ ಮೋಡಗಳ ಮರೆಯಿಂದ ವೀಕ್ಷಣೆಯ ಮತ್ತು ಹಗಲು-ರಾತ್ರಿ ಛಾಯಾಚಿತ್ರಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.ನಾಪತ್ತೆಯಾಗಿರುವ ವಿಮಾನದ ಇರುವಿಕೆಯ ಮೇಲೆ ಕೊಂಚ ಬೆಳಕು ಬೀರಲು ನೆರವಾಗಬಹುದಾದ ಉಪಗ್ರಹಗಳ ದತ್ತಾಂಶಗಳನ್ನು ಇಸ್ರೋ ಪರಿಶೀಲಿಸುತ್ತಿದೆ ಎಂದು ಕುಮಾರ್ ತಿಳಿಸಿದರು.ನಾಪತ್ತೆಯಾದ ವಿಮಾನವು ಯಾವುದೇ ‘ಶೋಧ ಮತ್ತು ರಕ್ಷಣೆ ’ ಸಂಕೇತ ದೀಪಗಳನ್ನು ಬೆಳಗಿಸಿರಲಿಲ್ಲ. ಹೀಗಾಗಿ ಅಂತಹ ಸಂಕೇತಗಳನ್ನು ಇಸ್ರೋದ ಉಪಗ್ರಹಗಳು ಗ್ರಹಿಸಿಲ್ಲ ಎಂದು ಅವರು ತಿಳಿಸಿದರು. ಅಲ್ಲದೆ ಇಂತಹ ಸಂಕೇತ ದೀಪಗಳನ್ನು ಹೊಂದಿರುವ ವಿಮಾನಗಳು ಉಪಗ್ರಹಗಳು ಸಂಕೇತಗಳನ್ನು ಗ್ರಹಿಸುವಂತೆ ಟ್ರಾನ್ಸ್‌ಮಿಟರ್ ಹೊಂದಿರಬೇಕು ಎಂದರು.ಬಂಗಾಳ ಕೊಲ್ಲಿಯ ಮೇಲೆ ಹಾರುತ್ತಿದ್ದಾಗ ನಾಪತ್ತೆಯಾಗಿರುವ ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದ್ದು, ಭಾರತೀಯ ನೌಕಾಪಡೆಯ 13 ಹಡಗುಗಳು ಮತ್ತು ತಟ ರಕ್ಷಣಾ ಪಡೆಯ ನಾಲ್ಕು ಹಡಗುಗಳು ಈ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.