ಗುಜರಾತ್ ಹತ್ಯಾಕಾಂಡ ವರದಿ ಮಾಡಿದರೆ ಚಾನಲ್ ಬಂದ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ' ಹೈ ಪ್ರೊಫೈಲ್ ' ಸಚಿವ

Update: 2016-07-23 15:46 GMT

ಹೊಸದಿಲ್ಲಿ , ಜು. 23 : 2002 ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ವರದಿ ಮಾಡುವುದನ್ನು ಮುಂದುವರಿಸಿದರೆ ಎನ್ ಡಿ ಟಿ ವಿ ಯನ್ನು ಬಂದ್ ಮಾಡಿಸುವುದಾಗಿ ' ಹೈ ಪ್ರೊಫೈಲ್ ' ಸಚಿವರೊಬ್ಬರು ಬೆದರಿಕೆ ಹಾಕಿದ್ದರು ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಬಹಿರಂಗಪಡಿಸಿದ್ದಾರೆ. 
ಎನ್ ಡಿ ಟಿ ವಿ ತನ್ನ 25 ವರ್ಷಗಳ ಪಯಣದ ಕುರಿತು ಇತ್ತೀಚಿಗೆ ಬಿಡುಗಡೆ ಮಾಡಿದ ' ಮೋರ್ ನ್ಯೂಸ್ ಈಸ್ ಗುಡ್ ನ್ಯೂಸ್ ' ಪುಸ್ತಕದಲ್ಲಿ ರಾಜದೀಪ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 
" 2002 ರ ಗುಜರಾತ್ ಹತ್ಯಾಕಾಂಡದ ವರದಿಗಾರಿಕೆ ನನ್ನ ವೃತ್ತಿ ಜೀವನದಲ್ಲಿ ಎಂದೂ ಮರೆಯದ ಅನುಭವ ನೀಡಿದೆ. ಬೇರೆ ಯಾವ ಸಂಸ್ಥೆಯಲ್ಲೂ ನನಗೆ ಎನ್ ಡಿ ಟಿ ವಿ ನೀಡಿದ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಆಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆಗ ಒಬ್ಬರು ' ಹೈ ಪ್ರೊಫೈಲ್ ' ಸಚಿವರು ನನಗೆ ಕಾಲ್ ಮಾಡಿ " ರಾಜದೀಪ್, ನೀವು ಗಲಭೆಯ ವರದಿ ಮಾಡಿದರೆ ಅದಕ್ಕೆ ಬೆಲೆ ತೆರುತ್ತೀರಿ. ನಾವು ಶಾಶ್ವತವಾಗಿ ನಿಮ್ಮ ಚಾನಲ್ ಮೇಲೆ ನಿಷೇಧ ಹೇರುತ್ತೇವೆ " ಎಂದು ಬೆದರಿಕೆ ಹಾಕಿದರು. 
ನಾನು ಅವರಿಗೆ " ಇದನ್ನು ನೀವು ಪ್ರಣಯ್ ರಾಯ್ (ಎನ್ ಡಿ ಟಿ ವಿ ಸಂಪಾದಕ ) ಗೆ ಹೇಳಿ ಎಂದು ಹೇಳಿದೆ. ಆದರೆ ಆ ಬಳಿಕ ಪ್ರಣಯ್ ನನಗೆ ಗುಜರಾತ್ ಗಲಭೆಯ ವರದಿ ನಿಲ್ಲಿಸಲು ಹೇಳಿಲ್ಲ. ವರದಿ ಸತ್ಯ ಆಧರಿತವಾಗಿರಬೇಕು ಎಂದಷ್ಟೇ ಅವರ ಸೂಚನೆಯಾಗಿತ್ತು " ಎಂದು ರಾಜದೀಪ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಮಗೆ ಸಹಕಾರ ನೀಡಿದ ಕ್ಯಾಮರಾಮ್ಯಾನ್ ಮತ್ತಿತರ ಸಿಬ್ಬಂದಿಗಳ ಸಹಕಾರವನ್ನು ಅವರು ಸ್ಮರಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News