×
Ad

ಹಿರಿಯಡ್ಕ ದೇವಳದ ಗೋಡೆ ಕುಸಿದು ಇಬ್ಬರು ಮೃತ್ಯು

Update: 2016-07-23 21:40 IST

ಹಿರಿಯಡ್ಕ, ಜು.23: ಇಲ್ಲಿನ ನಗರ ಕೇಂದ್ರ ಸ್ಥಾನದಲ್ಲಿರುವ ಹಿರಿಯಡ್ಕ ಮಹತೋಭಾರ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಯುವಕರು ಮೃತಪಟ್ಟು, ಓರ್ವ ಗಂಭೀರ ಹಾಗೂ ಇತರ ಐದು ಮಂದಿ ತೀವ್ರ ಗಾಯಗೊಂಡ ಘಟನೆ ಇಂದು ಸಂಜೆ 4:30ರ ಸುಮಾರಿಗೆ ನಡೆದಿದೆ.

ಮೃತರನ್ನು ದೇವಸ್ಥಾನದ ಬಳಿಯ ನಿವಾಸಿ ಅಂಗಾರ ಶೇರಿಗಾರ್ ಎಂಬವರ ಮಗ ಪ್ರಸಾದ್ ಶೇರಿಗಾರ್(22) ಹಾಗೂ ದಾಸ ಶೆಟ್ಟಿಗಾರ್‌ರ ಮಗ ಲೋಕೇಶ್ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.

ಬಜೆಯ ಅವಳಿ ಕಾಂಚನ್ ಎಂಬವರ ಮಗ ಶಿವಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅಪ್ಪು ಎಂಬವರ ಮಗ ಪ್ರಕಾಶ್, ಅಂಗಾರ ಶೇರಿಗಾರ್‌ರ ಮಗ ರಾಜೇಶ್, ಅಚ್ಯುತ ಆಚಾರ್ಯರ ಮಗ ಶ್ಯಾಮರಾಯ ಆಚಾರ್ಯ, ಮೋಹನ್ ಎಂಬವರ ಮಗ ಅಜಯ್ ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಸಣ್ಣಪುಟ್ಟ ಗಾಯಗೊಂಡಿರುವ ರಮೇಶ್ ಹಿರಿಯಡ್ಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ತುಳುನಾಡಿನ ಪ್ರಸಿದ್ಧ ಆಲಡೆಗಳಲ್ಲಿ ಒಂದಾಗಿರುವ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ಸಿರಿ ಜಾತ್ರೆ ಭಾರೀ ಖ್ಯಾತಿ ಪಡೆದಿದೆ. ದೇವಸ್ಥಾನದ ಆಡಳಿತ ಮಂಡಳಿ, ಪುರಾತನವಾದ ಈ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಶಿಲಾಮಯ ಗೊಳಿಸಲು ನಿರ್ಧರಿಸಿದ್ದು, ಅದರಂತೆ ನಿನ್ನೆ ಇದಕ್ಕೆ ಸಂಬಂಧಿಸಿದ ಪೂಜೆ ಹಾಗೂ ಧಾರ್ಮಿಕ ವಿಧಿಗಳನ್ನು ನಡೆಸಿತ್ತು. ಇಂದು ಬೆಳಗ್ಗೆ ದೇವಸ್ಥಾನದ ಗೋಡೆ ಕೆಡವುವ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ಸ್ಥಳೀಯರೆಲ್ಲರು ಸೇರಿ ದೇವಳದ ಹಳೆಯ ಮಣ್ಣಿನ ಗೋಡೆಯನ್ನು ಕೆಡವುದಕ್ಕಾಗಿ ಮಾಡಿನ ಹೆಂಚುಗಳನ್ನು ತೆರವುಗೊಳಿಸಿ ಮೇಲಿನ ಮರದ ಜಂತಿ ಹಾಗೂ ರೀಪನ್ನು ತೆರವುಗೊಳಿಸಲು ಮುಂದಾದರು. ಆಗ ಜಂತಿಯ ಮೇಲಿನ ಹಾಗೂ ಕೆಳಗಿನ ಮಣ್ಣಿನ ಗೋಡೆ ಇವರೆಲ್ಲರ ಮೈಮೇಲೆ ಬಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಸಾದ್ ಹಾಗೂ ಲೋಕೇಶ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಪ್ರಸಾದ್ ದೇವಸ್ಥಾನದ ಸಮೀಪವೇ ಹೂ ಮಾರುವ ಕೆಲಸ ಮಾಡುತ್ತಿದ್ದರೆ, ಲೋಕೇಶ್ ಎಲೆಕ್ಟ್ರೀಶನ್ ಕೆಲಸ ಮಾಡಿಕೊಂಡಿದ್ದರು. ಈ ದುರ್ಘಟನೆಯಲ್ಲಿ ಪ್ರಸಾದ್‌ರ ತಮ್ಮ ರಾಜೇಶ್ ಎಂಬವರು ಕೂಡ ಗಾಯಗೊಂಡಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News