ಆತ್ಮಹತ್ಯೆಗೈದ ರೈತರ ಮಕ್ಕಳಿಗೆ ಉಚಿತ ಶಿಕ್ಷಣ

Update: 2016-07-23 18:28 GMT

ಉಡುಪಿ, ಜು.23: ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅವರ ಮಕ್ಕಳಿಗೆ ಸ್ನಾತಕೋತ್ತರ ಪದವಿಯ ಹಂತದವರೆಗೆ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವಂತೆ ಶಿಕ್ಷಣ ಶುಲ್ಕ, ವಸತಿ ವೆಚ್ಚ ಹಾಗೂ ಹಾಸ್ಟೆಲ್ ಸೌಲಭ್ಯಗಳನ್ನು ಕಲ್ಪಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿ ಸರಕಾರ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ರೈತರ ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಹಂತದವರೆಗೆ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವಂತೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಅಥವಾ ಶಿಕ್ಷಣ ಶುಲ್ಕ ಮತ್ತು ವಸತಿ ವೆಚ್ಚವನ್ನು ಮರುಪಾವತಿ ಮಾಡುವ ಕುರಿತಂತೆ ರೈತರ ಮಕ್ಕಳ ವಿದ್ಯಾಭ್ಯಾಸದ ಎಲ್ಲಾ ವಿವರಗಳನ್ನು ನೀಡುವಂತೆ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಘಟಕಗಳಿಗೆ ಸುತ್ತೋಲೆಗಳನ್ನು ಕಳುಹಿಸಿದೆ.

ಉಡುಪಿ ಜಿಲ್ಲೆಯಲ್ಲಿ 2015-16ನೆ ಸಾಲಿನಲ್ಲಿ ಒಟ್ಟು ಏಳು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ ಆರು ಮಂದಿ ಕುಂದಾಪುರ ತಾಲೂಕು ಹಾಗೂ ಒಬ್ಬರು ಉಡುಪಿ ತಾಲೂಕಿನವರು. ಇವರೆಲ್ಲರ ಕುಟುಂಬಗಳಿಗೂ ಸರಕಾರದ ವತಿಯಿಂದ ಸಿಗುವ ತಲಾ ಐದು ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ.

ಇವರ ವಿವರ ಹೀಗಿದೆ: ಕುಂದಾಪುರ ತಾಲೂಕು: ಜಡ್ಕಲ್ ಗಂಗೆಕೊಡ್ಲುನ ಕೆ.ಕೆ.ಗಂಗಾಧರನ್(ದಿನ: 2015ರ ಮೇ 1), ಹೆಸ್ಕತ್ತೂರು ಹರ್ಯಾಡಿಯ ವಿಠಲ ಶೆಟ್ಟಿ (ಜು.21), ಅಮಾಸೆಬೈಲಿನ ರಾಮಕುಲಾಲ (ಅ.7), ಜಡ್ಕಲ್‌ನ ಸಿ.ಸಿ.ಜೋಸೆಫ್ (2016ರ ಫೆ.12), ಕೆರಾಡಿ ಗ್ರಾಮದ ಹೆರಿಯ ನಾಯ್ಕಾ (ಫೆ.17), ಜಡ್ಕಲ್ ವರ್ಕಿಯ ಕೆ.ವಿ.ಥೋಮಸ್ (ಮಾ.26) ಹಾಗೂ ಉಡುಪಿ ತಾಲೂಕು ಶಿರ್ವ ಗ್ರಾಮದ ಮಹೇಶ್ ಪೂಜಾರಿ(2015ರ ಆ.20).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News