×
Ad

ಪುತ್ತೂರು: ಪಾಳುಬಿದ್ದ ಕಟ್ಟಡವನ್ನು ತೆರವುಗೊಳಿಸಲು ಮುಂದಾದ ಜಿ.ಪಂ

Update: 2016-07-24 16:10 IST

ಪುತ್ತೂರು, ಜು.24: ಕೃಷಿ ಇಲಾಖೆಯ ಅಧೀನದಲ್ಲಿರುವ ಹಳೆಯ ಕಾಲದ ಪಾಳು ಬಿದ್ದಿರುವ ವಸತಿಗೃಹಗಳನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಜಿಲ್ಲಾ ಪಂಚಾಯತ್ ಮುಂದಾಗಿದ್ದು , ಪುತ್ತೂರು ತಾಲೂಕಿನಲ್ಲಿ ಕೃಷಿ ಇಲಾಖೆಗೆ ಸೇರಿದ ಮೂರು ಹಳೆಯ ಕಟ್ಟಡವನ್ನು ಮುಂದಿನ ದಿನಗಳಲ್ಲಿ ತೆರವುಗೊಳಿಸಲು ಕ್ರಮಕೈಗೊಳ್ಳುವುದಾಗಿ ಸೂಚನೆಯನ್ನು ನೀಡಲಾಗಿದೆ.

ಪುತ್ತೂರು ತಾಲೂಕಿನ ಕುಂಬ್ರ ಎಂಬಲ್ಲಿರುವ ಕೃಷಿ ಇಲಾಖೆಗೆ ಸೇರಿದ ವಸತಿಗೃಹ ಕಳೆದ 20 ವರ್ಷಗಳಿಂದ ಅನಾಥವಾಗಿದ್ದು, ಕಟ್ಟಡದ ಮೇಲೆ ಮರ ಬಿದ್ದು ಭಾಗಶಃ ದ್ವಂಸಗೊಂಡಿದೆ. ಇದರೊಂದಿಗೆ ತಿಂಗಳಾಡಿ ಮತ್ತು ಸವಣೂರಿನಲ್ಲಿದ್ದ ಮೂರು ಕಟ್ಟಡಗಳು ಅವಧಿ ಮೀರಿದ ಕಟ್ಟಡವಾಗಿದ್ದು ಇದು ವಾಸಮಾಡಲು ಯೋಗ್ಯವಲ್ಲ ಎಂದು ಈಗಾಗಲೇ ಇಲಾಖೆಯಿಂದ ಜಿಪಂಗೆ ವರದಿಯನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಇಲಾಖೆಂುಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಗ್ರಾಮ ಸಹಾಯರಿಗೆ ವಾಸ ಮಾಡಲೆಂದು ಸರಕಾರ ಕಳೆದ 30 ವರ್ಷಗಳ ಹಿಂದೆ ಹಲವು ಗ್ರಾಮಗಳಲ್ಲಿ ವಸತಿ ಗೃಹವನ್ನು ನಿರ್ಮಿಸಿತ್ತು. ಆ ಬಳಿಕ ಹುದ್ದೆಯನ್ನೇ ಸರಕಾರ ರದ್ದು ಮಾಡಿದ ಕಾರಣ ವಸತಿಗೃಹ ಖಾಲಿಯಾಗಿತ್ತು. ಈ ವಸತಿ ಗೃಹದ ಕಟ್ಟಡದಲ್ಲಿ ವಾಸ್ತವ್ಯವಿಲ್ಲದ ಕಾರಣ ವಸತಿಗೃಹಗಳು ಪಾಳು ಬಿದ್ದಿತ್ತು. ಇದೀಗ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ.

ಕುಂಬ್ರ, ತಿಂಗಳಾಡಿ ಮತ್ತು ಸವಣೂರಿನಲ್ಲಿರುವ ಕೃಷಿ ಇಲಾಖೆಗೆ ಸೇರಿದ ಕಟ್ಟಡಕ್ಕೆ ಸುಮಾರು 30 ವರ್ಷಗಳು ಕಳೆದಿದೆ. ಕಟ್ಟಡದ ಅವಧಿ ಮೀರಿದ ಕಾರಣ ಅದನ್ನು ಬಾಡಿಗೆಗೆ ನೀಡುವ ಸ್ಥಿತಿಯಲ್ಲಿಲ್ಲ. ಬಾಡಿಗೆಗೆ ನೀಡಿದರೂ ಕಟ್ಟಡ ಬಿದ್ದು ಅನಾಹುತವಾಗಬಹುದೆಂಬ ಕಾರಣಕ್ಕೆ ಕಟ್ಟಡವನ್ನು ಹಾಗೇ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಕಟ್ಟಡದ ಸಾಮರ್ಥ್ಯವನ್ನು ಜಿಪಂ ಇಲಾಖೆ ಪರಿಶೀಲನೆ ಮಾಡಲಿದೆ. ಕಟ್ಟಡ ಯೋಗ್ಯ ರೀತಿಯಲ್ಲಿ ಇಲ್ಲದೇ ಇದ್ದರೆ ಅದನ್ನು ಕೆಡವಿ ಅಲ್ಲಿ ಕೃಷಿ ಇಲಾಖೆಯಿಂದ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿ ಅದರಲ್ಲಿ ಕೃಷಿ ಪರಿಕರಗಳ ಗೋದಾಮು ನಿರ್ಮಿಸಲು ಸರಕಾರ ಮುಂದಾಗಿದೆ. ತಾಲೂಕಿನಲ್ಲಿ ಒಟ್ಟು ಏಳು ವಸತಿಗೃಹ ಇದೆ ಅದರಲ್ಲಿ ನಾಲ್ಕು ಕಟ್ಟಡವನ್ನು ಬಾಡಿಗೆಗೆ ನೀಡಲಾಗಿದೆ. ಮೂರು ಕಟ್ಟಡ ಮಾತ್ರ ಶಿಥಿಲಗೊಂಡಿದೆ.

ನಈಮ್ ಹುಸೇನ್
ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು.

ಕಟ್ಟಡ ಅವಧಿ ಮೀರಿದ್ದರೆ ಅದನ್ನು ಕೆಡವುದೇ ಸೂಕ್ತ. ಆದರೆ ಅದನ್ನು ಹಾಗೇ ಬಿಟ್ಟರೆ ಅದನ್ನು ನೋಡುವಾಗ ನಮಗೆ ಬೇಸರವಾಗುತ್ತದೆ. ಜನರ ದುಡ್ಡಿನಿಂದ ನಿರ್ಮಿಸಿದ ಕಟ್ಟಡ ಮಣ್ಣಾಗಿ ಹೋಗುವುದು ಅತ್ಯಂತ ಬೇಸರದ ಸಂಗತಿ. ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಿದರೆ ಅದು ಉತ್ತಮ ವಿಚಾರವಾಗಿದೆ.

ರಾಜೇಶ್ ರೈ ಪರ್ಪುಂಜ, ಪುತ್ತೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News