ಧ್ವನಿಯಿಲ್ಲದವರ ಧ್ವನಿಯಾಗಿದ್ದ ವಡ್ಡರ್ಸೆ: ಮೋಹನ್ ಆಳ್ವ

Update: 2016-07-24 13:27 GMT

ಬ್ರಹ್ಮಾವರ, ಜು.24: ಓರ್ವ ಪ್ರಾಮಾಣಿಕ ಪತ್ರಕರ್ತನಾಗಿ ತನ್ನ ನಿಷ್ಟುರ ನೇರ ನಡೆ ನುಡಿಯಿಂದ ಪತ್ರಿಕೋದ್ಯಮದಲ್ಲಿ ಹೊಸ ಛಾಪನ್ನು ಮೂಡಿಸಿದ್ದ ವಡ್ಡರ್ಸೆ ರಘುರಾಮ್ ಶೆಟ್ಟಿ ಧ್ವನಿಯಿಲ್ಲದವರ ಧ್ವನಿಯಾಗಿ ಮೆರೆದಿದ್ದರು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವ ಹೇಳಿದ್ದಾರೆ.

ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಬ್ರಹ್ಮಾವರ ಬಂಟರ ಭವನದಲ್ಲಿ ರವಿವಾರ ಆಯೋಜಿಸಲಾದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪತ್ರಿಕೆಗಳು ಇಂದು ಜನಸಾಮಾನ್ಯರಲ್ಲಿ ವಿವಿಧ ರೀತಿಯನ್ನು ಅಭಿರುಚಿ ಮೂಡಿಸುತ್ತಿವೆ. ಸಮಾಜದ ಕಣ್ಣುಗಳಾದ ಪತ್ರಿಕೆಗಳು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರಿಗೆ ತಮ್ಮದೇ ಆದ ಜವಾಬ್ದಾರಿ ಇದ್ದು, ಸುದ್ದಿಯನ್ನು ನೀಡುವಾಗ ವಿಶ್ಲೇಷಿಸಿ, ವಿಮರ್ಶಿಸಿ ನೀಡಿದಲ್ಲಿ ಅದರ ಮೌಲ್ಯ ಹೆಚ್ಚುತ್ತದೆ. ತಮ್ಮ ಬದುಕು ಬರಹದ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ರಘುರಾಮ್ ಶೆಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಉತ್ತಮ ಕೆಲಸಗಳನ್ನು ಮಾಡಿದ ಸ್ಥಳೀಯ ಪತ್ರಕರ್ತರನ್ನು ಗುರುತಿಸುವ ಕಾರ್ಯವೂ ಆಗಬೇಕಿದೆ ಎಂದು ಅವರು ತಿಳಿಸಿದರು.

ಬ್ರಹ್ಮಾವರ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಉದ್ಯಮಿ ಜೆ.ರತ್ನಾಕರ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹೆಸರಿನಲ್ಲಿ ಓರ್ವ ನಿಷ್ಟಾವಂತ, ಪ್ರಾಮಾಣಿಕ ಪತ್ರಕರ್ತನಿಗೆ ಸರಕಾರ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸಬೇಕು, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸ್ವಂತ ಜಾಗ ಮತ್ತು ಕಟ್ಟಡ ನಿರ್ಮಿಸಿಕೊಡುವ ಕುರಿತು ಮತ್ತು ಕೋಟ ಮೂರುಕೈಯಲ್ಲಿ ವೃತ್ತವನ್ನು ನಿರ್ಮಿಸಿ ಅದಕ್ಕೆ ವಡ್ಡರ್ಸೆ ರಘುರಾಮ್ ಶೆಟ್ಟಿ ಹೆಸರನ್ನು ಇಡುವಂತೆ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಕೋಶಾಧಿಕಾರಿ ಶೇಷಗಿರಿ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯದರ್ಶಿ ಅಶ್ವಥ್ ಆಚಾರ್ಯ ಯಡಬೆಟ್ಟು ವಂದಿಸಿದರು. ಸಂಘದ ಸದಸ್ಯ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News