ಉಳ್ಳಾಲ: ಕೆರೆಗೆ ಬಿದ್ದು ಯುವಕ ಮೃತ್ಯು
ಉಳ್ಳಾಲ, ಜು.24: ತನ್ನಿಬ್ಬರು ಸ್ನೇಹಿತರೊಂದಿಗೆ ಸೋಮೇಶ್ವರ ಕಡಲ ಕಿನಾರೆಗೆ ವಿಹಾರಕ್ಕೆ ತೆರಳಿದ್ದ ಯುವಕನೋರ್ವ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಈತನನ್ನು ರಕ್ಷಿಸಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿಕೊಂಡಿದ್ದ ಮತ್ತೋರ್ವ ಸ್ನೇತನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತನನ್ನು ವಿಟ್ಲ ಮಾಣಿಲದ ನಿವಾಸಿ ಸುಧಾಕರ್(26) ಎಂದು ಗುರುತಿಸಲಾಗಿದೆ. ಕೊಂಡಾಣದ ಮಿತ್ರನಗರದಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದ ಇವರು, ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಿತ್ರನಗರದ ಸ್ನೇತರಾದ ಚೇತನ್ ಮತ್ತು ಪದ್ಮನಾಭ್ ಎಂಬವರೊಂದಿಗೆ ಸೋಮೇಶ್ವರ ಸಮುದ್ರ ಕಿನಾರೆಗೆ ವಿಹಾರಕ್ಕೆಂದು ತೆರಳಿದ್ದರು.
ಸಮುದ್ರದ ಉಪ್ಪುನೀರಿನಲ್ಲಿ ಆಟವಾಡಿ ಕಾಲು ತೊಳೆಯಲೆಂದು ಹಿನ್ನೀರಿನ ಕೆರೆಯ ಬಳಿ ಬಂದಾಗ ಜಾರಿ ಬಿದ್ದು ನೀರು ಪಾಲಾಗಿ ಮೃತಪಟ್ಟಿದ್ದಾರೆ. ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದ್ದ ಕಾರಣ ಸುಧಾಕರ್‌ಗೆ ಮೇಲಕ್ಕೆ ಬರಲಾಗದೆ ತಕ್ಷಣ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ಮುಳುಗುತ್ತಿದ್ದ ಸುಧಾಕರ್‌ನನ್ನು ರಕ್ಷಿಸಲು ಹೋದ ಪದ್ಮನಾಭ್ ಕೂಡ ಕೆರೆಯ ಹೂಳಲ್ಲಿ ಸಿಕ್ಕಿಬಿದ್ದಿದ್ದು ಇದನ್ನು ಕಂಡ ಸ್ಥಳೀಯ ಈಜು ರಕ್ಷಕರಾದ ಮೋಹನ್, ದಿನೇಶ್, ಕಿರಣ್ ಮತ್ತು ಪ್ರೀತಮ್ ಅವರು ಸಮಯಪ್ರಜ್ಞೆ ಮೆರೆದು ಪದ್ಮನಾಭ್‌ರ ಪ್ರಾಣ ರಕ್ಷಿಸಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.