ದೇವಳ ದುರಂತ: ಹಿರಿಯಡ್ಕದಲ್ಲಿ ಬಂದ್ ಆಚರಣೆ
ಹಿರಿಯಡ್ಕ, ಜು.24: ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ದೇವ ಸ್ಥಾನದ ಗೋಡೆ ಕುಸಿದು ಇಬ್ಬರು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ರವಿವಾರ ಹಿರಿಯಡ್ಕ ಪೇಟೆಯಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿ ಶೋಕ ವ್ಯಕ್ತಪಡಿಸಲಾಯಿತು.
ಬೆಳಗ್ಗೆಯಿಂದಲೇ ಪೇಟೆಯ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ರಿಕ್ಷಾ, ಟ್ಯಾಕ್ಸಿ ಚಾಲಕ ಮಾಲಕರು ಕೂಡ ತಮ್ಮ ವಾಹನಗಳನ್ನು ಬೀದಿಗೆ ಇಳಿಸದೆ ಬಂದ್ ಆಚರಿಸಿದರು. ಈ ಮೂಲಕ ಮೃತರಿಗೆ ಹಿರಿಯಡ್ಕದ ಗ್ರಾಮಸ್ಥರು ಶ್ರದ್ಧಾಂಜಲಿ ಅರ್ಪಿಸಿದರು.
ಮೃತ ಶಿವಪ್ರಸಾದ್ ಸೇರಿಗಾರ್(28) ಹಾಗೂ ಲೋಕೇಶ್ ಶೆಟ್ಟಿಗಾರ್(22)ಅವರ ಅಂತ್ಯಸಂಸ್ಕಾರ ರವಿವಾರ ಸಂಜೆೆ ಹಿರಿಯಡ್ಕದಲ್ಲಿ ನಡೆಯಿತು.
ದುರಂತದಲ್ಲಿ ಗಾಯಗೊಂಡ ಶಿವಪ್ರಸಾದ್ ಮೊಗವೀರ ಅವರ ಸ್ಥಿತಿ ಗಂಭೀರವಾಗಿದೆ. ಇತರ ಗಾಯಾಳು ಗಳಾದ ರಾಜೇಶ್ ದೇವಾಡಿಗ, ಶ್ಯಾಮರಾಯ ಆಚಾರ್ಯ, ಅಜಯ್ ದೇವಾಡಿಗ, ಪ್ರಕಾಶ್ ಸೇರಿಗಾರಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಮಣಿಪಾಲ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.