ಗೋಳಿತೊಟ್ಟು ಬಳಿ ಖಾಸಗಿ ಬಸ್ ಪಲ್ಟಿ: 8 ಮಂದಿಗೆ ಗಾಯ
Update: 2016-07-25 09:41 IST
ಪುತ್ತೂರು, ಜು.25: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆಯಲ್ಲಿ ಉರುಳಿ ಬಿದ್ದು ಇನ್ಫೋಸಿಸ್ ಉದ್ಯೋಗಿಗಳಿಬ್ಬರು ಸೇರಿದಂತೆ 8 ಮಂದಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಸೀಬರ್ಡ್ ಹೆಸರಿನ ಖಾಸಗಿ ಬಸ್ಸು ಗೋಳಿತೊಟ್ಟು ಕೋಲ್ಪೆನಡುವಿನ ರಸ್ತೆಯಲ್ಲಿ ಪಲ್ಟಿಯಾಗಿತ್ತು. ಈ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ ಬೆಂಗಳೂರು ನಿವಾಸಿಗಳಾದ ಮಂಗಳೂರು ಇನ್ಫೋಸಿಸ್ ಸಂಸ್ಥೆಯಲ್ಲಿನ ಉದ್ಯೋಗಿಗಳಾದ ನವೀನ್(25), ರವಿ(26) ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ನವೀನ್ ಮತ್ತು ರವಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.