ಕಲ್ಲಪ್ಪ ಹಂಡಿಭಾಗ್ ಪ್ರಕರಣದ ಬಗ್ಗೆ ಬಿಜೆಪಿ ಜಾಣ ಮೌನ: ಸಚಿವ ರೈ

Update: 2016-07-25 09:22 GMT

ಮಂಗಳೂರು, ಜು.25: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ಆಧಾರಹಿತ ಆರೋಪ ಮಾಡಿರುವ ಬಿಜೆಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜಾಣ ಮೌನ ವಹಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 131 ವರ್ಷಗಳ ಇತಿಹಾಸದೊಂದಿಗೆ ದೇಶದಲ್ಲಿ ಜಾತ್ಯತೀತ ಸಿದ್ಧಾಂತ ಹಾಗೂ ತ್ಯಾಗ ಬಲಿದಾನಗಳೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸಿರುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

ನ್ಯಾಯಬದ್ಧ ತನಿಖೆಗೆ ಪೂರಕವಾಗಿ ಸಚಿವ ಜಾರ್ಜ್‌ರವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಿದ್ದರೂ ವಿರೋಧ ಪಕ್ಷವಾದ ಬಿಜೆಪಿ ಇಲ್ಲ ಸಲ್ಲದ ಹೇಳಿಕೆ ನೀಡಿ ಜನತೆ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಆದರೆ, ಕೇಂದ್ರದಲ್ಲಿ ಗುರುತರ ಆರೋಪ ಹೊಂದಿರುವ ಬಿಜೆಪಿ ಶಾಸಕರು, ಸಂಸದರು ಮಾತ್ರ ಅಧಿಕಾರದಲ್ಲಿಯೇ ಮುಂದುವರಿದಿದ್ದಾರೆ. ಕೇಂದ್ರ ಸರಕಾರದಲ್ಲಿ ರಾಮ್ ಶಂಕರ್ ಕಠಾರಿಯಾ, ಉಮಾಭಾರತಿ, ವಿ.ಎಸ್. ಚೌಧುರಿ ಸೇರಿದಂತೆ 14 ಮಂದಿಯ ವಿರುದ್ಧ ಕ್ರಿಮಿನಲ್ ಆಪಾದನೆ ಇದೆ. ಹಾಗಿದ್ದರೂ ಅವರು ಮಂತ್ರಿಗಳಾಗಿ ಮುಂದುವರಿದಿದ್ದಾರೆ. ರಾಜ್ಯದಲ್ಲಿ ಸಣ್ಣ ವಿಚಾರ ಎತ್ತಿ ಹಿಡಿದು ಪಕ್ಷದ ವರ್ಚಸ್ಸಿಗೆ ಕುಂದು ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಸಚಿವ ರೈ ಆಪಾದಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ 13 ಗಂಭೀರ ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಒತ್ತಡ ಹೇರಿದ್ದರೂ ಒಂದನ್ನೂ ವಹಿಸಿರಲಿಲ್ಲ. ಸಿಬಿಐ ಮೇಲೆ ವಿಶ್ವಾಸ ಇಲ್ಲ ಎಂಬ ಹೇಳಿಕೆಯೊಂದಿಗೆ ಅಂದು ಭಂಡತನ ಪ್ರದರ್ಶಿಸಿದ್ದ ಬಿಜೆಪಿ ಈಗ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ. ಕಾಂಗ್ರೆಸ್ ಸರಕಾರ ಮೂರು ವರ್ಷಗಳ ಆಡಳಿತದಲ್ಲಿ 8 ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದೆ. ಸಿಬಿಐ ಪಂಜರದ ಗಿಳಿ ಎನ್ನುತ್ತಿದ್ದ ಬಿಜೆಪಿಗೆ ಈಗ ಅದರ ಮೇಲೆ ಪ್ರೀತಿ ಬಂದಿದೆ. ಪೊಲೀಸ್ ಅಧಿಕಾರಿಗಳ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿರುವ ಬಿಜೆಪಿ ತಮ್ಮ ಅಧಿಕಾರಾವಧಿಯಲ್ಲಿ ಅವರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎಂಬದುನ್ನು ತಿಳಿಯಬೇಕಾಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಮೇಲೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಗೋ ರಕ್ಷಣೆಯ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ಅತಿಕ್ರಮಣ ಹೆಚ್ಚಿದೆ. ಕೇಂದ್ರ ಸರಕಾರದ ಕಿರುಕುಳ ತಾಳಲಾರದೆ ಕೆಲವು ಅಧಿಕಾರಿಗಳು ಈಗಾಗಲೇ ಸ್ವಯಂ ನಿವೃತ್ತಿ ಪಡೆದಿರುವ ಉದಾಹರಣೆಗಳೂ ಇವೆ. ವೇಮುಲಾ ಆತ್ಮಹತ್ಯೆಗೆ ಸ್ಮತಿ ಇರಾನಿ ಸೇರಿದಂತೆ ಕೇಂದ್ರದ ಇಬ್ಬರು ಸಚಿವರ ಹೆಸರನ್ನು ತನ್ನ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದರೂ ಅವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಸಚಿವ ರೈ ದೂರಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮೇಯರ್ ಹರಿನಾಥ್, ನಾಯಕರಾದ ಶಶಿಧರ್ ಹೆಗ್ಡೆ, ಮಿಥುನ್ ರೈ, ಅಶ್ರಫ್, ಎಂ.ಎಸ್.ಮುಹಮ್ಮದ್, ಎ.ಸಿ. ಭಂಡಾರಿ, ಗೋಪಾಲ ಭಂಡಾರಿ, ಅಪ್ಪಿಲತಾ, ಪದ್ಮನಾಭ ನರಿಂಗಾನ, ಟಿ.ಕೆ. ಸುಧೀರ್, ಡಿ.ಕೆ. ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಜಾರ್ಜ್ ಸ್ವಯಂಪ್ರೇರಿತರಾಗಿ ರಾಜೀನಾಮೆ

ತನ್ನ ಮೇಲೆ ಬಂದಿರುವ ಆರೋಪದಿಂದ ಪಕ್ಷಕ್ಕೆ, ಸರಕಾರಕ್ಕೆ ಮುಜಗರ ಆಗಬಾರದು. ನಿಷ್ಪಕ್ಷಪಾತ ತನಿಖೆ ಆಗಬೇಕೆಂಬ ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಕೆ.ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಗೆ ಹೈಕಮಾಂಡ್ ಆಗಲಿ ಮುಖ್ಯಮಂತ್ರಿಯಾಗಲಿ ಒತ್ತಡ ತಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ರೈ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News