ಕೊಣಾಜೆಯಲ್ಲಿ ಜಲ ಸಾಕ್ಷರತಾ ಅಭಿಯಾನಕ್ಕೆ ಚಾಲನೆ

Update: 2016-07-25 12:13 GMT

ಕೊಣಾಜೆ, ಜು.25: ಕಳೆದ ಬೇಸಿಗೆಯಲ್ಲಿ ನಮ್ಮ ಜಿಲ್ಲೆಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿತ್ತು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಜನರಿಗೆ ಜಲ ಸಾಕ್ಷರತೆಯ ಮೂಲಕ ಅರಿವು ಹುಟ್ಟಿಸುವ ಕೆಲಸ ಆಗಬೇಕಿದೆ ಎಂದು ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಅಭಿಪ್ರಾಯಪಟ್ಟರು.

ಕೊಣಾಜೆ ಗ್ರಾಮ ಪಂಚಾಯತ್ ಅಪ್ನಾದೇಶ್ ಅಭಿವೃದ್ದಿ ಜನಶಿಕ್ಷಣ ಟ್ರಸ್ಟ್, ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿವಿ ಇವುಗಳ ಆಶ್ರಯದಲ್ಲಿ ಸೋಮವಾರ ಕೊಣಾಜೆ ಗ್ರಾಮದಲ್ಲಿ ನಡೆದ ಜಲ ಸಾಕ್ಷರತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಿ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗಿತ್ತು. ಇಡೀ ಜಿಲ್ಲೆಯಲ್ಲಿಯೇ ಕೊಣಾಜೆ ಗ್ರಾಮದಲ್ಲೇ ಅತ್ಯಧಿಕ ನೀರಿನ ಸಮಸ್ಯೆ ಎದುರಾಗಿತ್ತು. ಇದೀಗ ಜಲ ಸಾಕ್ಷರತಾ ಅಭಿಯಾನದ ಮೂಲಕ ನಾವು ಗ್ರಾಮದ ಪ್ರತಿಯೊಬ್ಬರಲ್ಲೂ ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದು ಹಲವು ಸಂಘಟನೆಗಳು ಇದಕ್ಕೆ ಕೈ ಜೋಡಿಸಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಜಯಾ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ಸುರೇಂದ್ರ ಹೆಗ್ಡೆ ಮಾತನಾಡಿ, ನಾವು ಬೇರೆ ರಾಜ್ಯಕ್ಕೆ ಹೋದಾಗ ನಮ್ಮ ಮಂಗಳೂರಿನ ಜನರಿಗೆ ಬಾಡಿಗೆ ಮನೆ ಕೊಡಲೂ ಕೆಲವರು ಹಿಂಜರಿಯುತ್ತಾರೆ. ಕಾರಣ ಇಲ್ಲಿಯ ಜನ ನೀರಿನ ಮಹತ್ವ ಅರಿಯದೆ ಅತ್ಯಧಿಕ ಖರ್ಚು ಮಾಡುತ್ತಾರೆ ಎಂಬ ಕಾರಣದಿಂದ. ಆದರೆ ಕಳೆದ ಕೆಲವು ವರ್ಷದಿಂದ ನಮ್ಮ ಜಿಲ್ಲೆಯಲ್ಲೂ ಬರಗಾಲದ ಪರಿಸ್ಥಿತಿ ಎದುರಾಗಿತ್ತು. ಆದ್ದರಿಂದ ನಾವು ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆಯ ಮೂಲಕ ಕೊಡುಗೆ ನೀಡಬೇಕು. ಅಲ್ಲದೆ ಪ್ರತಿಯೊಬ್ಬರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಸಾದ್ ರೈ ಕಲ್ಲಿಮಾರ್, ಕೆ.ಕೆ. ನಾಸೀರ್, ಎನ್ನೆಸ್ಸೆಸ್‌ನ ಯೋಜನಾಧಿಕಾರಿ ಪ್ರೊ.ವಿನಿತಾ ರೈ, ವಿಜಯ ಗ್ರಾಮಾಭಿವೃದ್ದಿ ಪ್ರತಿಷ್ಠಾನದ ಉದಯಕುಮಾರ್, ಕೊಣಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ, ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ, ಅಬ್ದುರ್ರಹ್ಮಾನ್ ಕೋಡಿಜಾಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟಕ ಅಚ್ಯುತ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News