ಮಲಾರ್: ಎಂಇಎಸ್ ವತಿಯಿಂದ ಮದರಸ ಪುಸ್ತಕ ವಿತರಣೆ

Update: 2016-07-25 13:02 GMT

ಕೊಣಾಜೆ, ಜು.25: ಓರ್ವ ವ್ಯಕ್ತಿ ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕಬೇಕಾದರೆ ಧಾರ್ಮಿಕ ಶಿಕ್ಷಣವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಲೌಕಿಕ ಶಿಕ್ಷಣದ ಜೊತೆ ಧಾರ್ಮಿಕ ಶಿಕ್ಷಣಕ್ಕೂ ಆದ್ಯತೆ ನೀಡಿ ದೇಶದ ಸಂಪತ್ತಾಗಿ ರೂಪುಗೊಳ್ಳಬೇಕು ಎಂದು ಮಂಗಳೂರು ಕೇಂದ್ರ ಜುಮಾ ಮಸೀದಿ ಖತೀಬ್ ವಿ.ಕೆ.ಸ್ವದಕತ್ತುಲ್ಲಾ ಫೈಝಿ ಹೇಳಿದರು.

ಎಂಇಎಸ್ ಸಂಘಟನೆ ವತಿಯಿಂದ ಮಲಾರ್ ಕೋಡಿ ನೂರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ರವಿವಾರ ನಡೆದ ಮದರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಇಂದು ಜನ ಆಧುನಿಕತೆಯ ಬೆನ್ನು ಬಿದ್ದು ಕೇವಲ ಲೌಕಿಕ ಶಿಕ್ಷಣದತ್ತ ಆಸಕ್ತರಾಗಿ ಪದವಿ ಗಳಿಸುವುದರಲ್ಲಿ ತಲ್ಲೀನರಾಗಿದ್ದಾರೆ, ಆದರೆ ಮಾನವನ ಜೀವನ ಕ್ರಮ ರೂಪಿಸುವ ಶಕ್ತಿ ಧಾರ್ಮಿಕ ಶಿಕ್ಷಣಕ್ಕಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುರ್ರಝಾಕ್ ಅಝ್ಹರಿ ಮಾತನಾಡಿ, ಶಿಕ್ಷಣ ಎನ್ನುವುದು ಎಂದಿಗೂ ಪೂರ್ಣ ಕಲಿಯುವ ವಿದ್ಯೆಯಲ್ಲ, ಕಲಿಕೆ ವಿಷಯದಲ್ಲಿ ಮಕ್ಕಳು ಮಾತ್ರ ವಿದ್ಯಾರ್ಥಿಗಳಲ್ಲ. ತಾವು ಕಲಿತವರು ಎನ್ನುವ ಅಹಂಬಾವ ಹೊಂದುವ ಬದಲು ಪ್ರತಿನಿತ್ಯ ಜೀವನಪೂರ್ತಿ ಕಲಿಯುತ್ತಾ ವಿದ್ಯಾರ್ಥಿಗಳಾಗಿ ಹೆಚ್ಚು ಜ್ಞಾನ ಸಂಪಾದಿಸಬೇಕು. ಎಂದೋ ಇಹಲೋಕದಿಂದ ಮರೆಯಾದ ಮಹಾತ್ಮರನ್ನು ಇಂದಿಗೂ ನೆನಪಿಸಬಹುದಾದರೆ ಅವರು ಪಡೆದ ಧಾರ್ಮಿಕ ವಿದ್ಯೆಯೇ ಮೂಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ತಮಿಳ್ನಾಡು ಮಧುರೈನ ಅಂತರಾಷ್ಟ್ರೀಯ ತಮಿಳು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಇವರನ್ನು ಸನ್ಮಾನಿಸಲಾಯಿತು.

ಮುಹಿದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಮಾಸ್ಟರ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪಾಧ್ಯಕ್ಷ ಹಾಜಿ ಯೂಸುಫ್ ಮಲಾರ್, ಮಾಜಿ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್, ಮುಅದ್ದೀನ್ ಮೌಲಾನ ಅಬ್ದುಲ್ ಹಕೀಂ, ಬದ್ರಿಯಾನಗರ ಜುಮಾ ಮಸೀದಿ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ ಅಜ್ಮೀರ್, ಎಂಇಎಸ್ ಸಂಚಾಲಕ ಝಕರಿಯಾ ಮಲಾರ್, ಅಧ್ಯಕ್ಷ ಸಿರಾಜ್ ಕೋಡಿ, ನೂರುಲ್ ಇಸ್ಲಾಂ ಮದರಸ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಮ್ರಾನ್ ಮಲಾರ್ ಪದವು, ಪಾವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ಬದ್ರಿಯಾ ನಗರ ಮೊದಲಾದವರು ಉಪಸ್ಥಿತರಿದ್ದರು.

ಮದರಸ ವಿದ್ಯಾರ್ಥಿ ಮಹಮ್ಮದ್ ಮುಫೀಝ್ ಕಿರಾಅತ್ ಪಠಿಸಿದರು. ಎಂಇಎಸ್ ಪ್ರಧಾನ ಕಾರ್ಯದರ್ಶಿ ಝಾಯಿದ್ ಮಲಾರ್ ಸ್ವಾಗತಿಸಿದರು. ಗೌರವ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಪಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಿಯುದ್ದೀನ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮಜೀದ್ ಮಾಸ್ಟರ್ ವಂದಿಸಿದರು. ಸದ್‌ರ್ ಮುಅಲ್ಲೀಂ ಇರ್ಫಾನ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News