×
Ad

ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತ: ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಡಿದ ಸುಳ್ಯದ ಪ್ರಯಾಣಿಕರು

Update: 2016-07-25 18:43 IST

ಸುಳ್ಯ, ಜು.25: ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರ ಸಂಘದ ಕರೆಯಂತೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ರವಿವಾರ ಸಂಜೆ ಗ್ರಾಮೀಣ ಪ್ರದೇಶಕ್ಕೆ ಹೋಗಿದ್ದ ಬಸ್‌ಗಳು ಸುಳ್ಯ ಬಸ್ ನಿಲ್ದಾಣದಿಂದ ಸಂಚಾರ ಮೊಟಕುಗೊಳಿಸಿದ್ದವು. ಹಲವು ಬಸ್‌ಗಳನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ನೌಕರರು ತೆರಳಿದ್ದಾರೆ. ತಾಲೂಕಿನ ಬಹಳಷ್ಟು ರಸ್ತೆಗಳಲ್ಲಿ ಸರಕಾರಿ ಬಸ್ ಓಡಾಟ ಇರುವುದರಿಂದ ನೌಕರರ ಮುಷ್ಕರದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

ಮ್ಯಾಕ್ಸಿಕ್ಯಾಬ್, ಜೀಪು, ಕಾರು, ಖಾಸಗಿ ಬಸ್‌ಗಳು ಹಾಗೂ ಕೇರಳ ರಾಜ್ಯ ಸರಕಾರಿ ಬಸ್ ಓಡಾಟ ಎಂದಿನಂತಿತ್ತು. ಸುಳ್ಯ ಪುತ್ತೂರು ತಾಲೂಕಿನ ಗ್ರಾಮೀಣ ಭಾಗದಿಂದ ಬರುವ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಬಸ್‌ನ್ನೇ ಅವಲಂಬಿಸಿದ್ದರಿಂದ ಕಾಲೇಜುಗಳಲ್ಲಿ ಹಾಜರಾತಿ ತೀರಾ ಕಡಿಮೆ ಇತ್ತು. ಜಿಲ್ಲಾಡಳಿತ ಕಾಲೇಜುಗಳಿಗೆ ರಜೆ ಘೋಷಿಸದ ಕಾರಣ ವಿದ್ಯಾರ್ಥಿಗಳು ಮ್ಯಾಕ್ಸಿಬ್ಯಾಬ್‌ಗಳಲ್ಲಿ ಪ್ರಯಾಣಿಸಬೇಕಾಯಿತು.

ಅನಿರ್ದಿಷ್ಟಾವಧಿ ಮುಷ್ಕರ ಆರಂಭದಿಂದ ಸುಳ್ಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ನಿಲ್ದಾಣದ ಅಂಗಡಿಗಳಿಗೆ ವ್ಯಾಪಾರ ಇರಲಿಲ್ಲ. ಹೋಟೆಲ್ ಹಾಗೂ ಕೆಲವು ಅಂಗಡಿಗಳು ಗ್ರಾಹಕರಿಲ್ಲದೆ ಬಂದ್ ಆಗಿದ್ದವು. ಬಸ್ ಮುಷ್ಕರದಿಂದ ಗ್ರಾಮೀಣ ಜನತೆ ನಗರಕ್ಕೆ ಬಾರದೇ ಜನ ಸಂಚಾರವೂ ವಿರಳವಾಗಿತ್ತು. ಅಂಗಡಿಗಳಲ್ಲಿ ವ್ಯವಹಾರವೂ ಕಡಿಮೆಯಾಗಿತ್ತು. ಸುಳ್ಯ-ಪುತ್ತೂರು ರಸ್ತೆಯಲ್ಲಿ ಬಸ್‌ಗಳಿಗೆ ಪರ್ಯಾಯವಾಗಿ ಮ್ಯಾಕ್ಸಿಕ್ಯಾಬ್‌ಗಳು ಓಡಾಟ ನಡೆಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News