×
Ad

ಕೆಎಸ್ಸಾರ್ಟಿಸಿ ನೌಕರರ ಮುಷ್ಕರಕ್ಕೆ ಮಂಗಳೂರಿನಲ್ಲಿಯೂ ಉತ್ತಮ ಪ್ರತಿಕ್ರಿಯೆ

Update: 2016-07-25 19:25 IST

ಮಂಗಳೂರು, ಜು. 25: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ರಾಜ್ಯಾದ್ಯಾಂತ ನಡೆಸುತ್ತಿರುವ ಮುಷ್ಕರಕ್ಕೆ ಮಂಗಳೂರಿನಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ಕರೆ ನೀಡಿದ್ದ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೆಎಸ್ಸಾರ್ಟಿಸಿ ನೌಕರರು ಮುಂಜಾನೆಯಿಂದ ಕೆಲಸಕ್ಕೆ ಹಾಜರಾಗಲಿಲ್ಲ.

ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ರವಿವಾರ ರಾತ್ರಿ 12 ಗಂಟೆ ನಂತರ ಯಾವುದೆ ನೌಕರರು ಕೆಲಸ ಮಾಡದಂತೆ ಕರೆ ನೀಡಿತ್ತು. ಆದರೆ ರಾತ್ರಿ ದೂರದೂರಿಗೆ ಪ್ರಯಾಣಿಸಲು ನೂರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ದೂರದೂರಿಗೆ ಬಸ್ ಸಂಚಾರ ನಡೆಸಿತು. ಇಂದು ಮುಂಜಾನೆಯಿಂದ ಯಾವುದೆ ನೌಕರರು ಕೆಲಸಕ್ಕೆ ಹಾಜರಾಗದೆ ಇದ್ದುದರಿಂದ ಜಿಲ್ಲೆಯಲ್ಲಿ ಯಾವುದೆ ಬಸ್‌ಗಳು ಸಂಚಾರ ನಡೆಸಿಲ್ಲ.

ಮಂಗಳೂರು ಡಿಪೋದಿಂದ ರವಿವಾರ ರಾತ್ರಿ ದೂರದೂರಿಗೆ ತೆರಳಿದ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸುಮಾರು 15 ಬಸ್‌ಗಳಿಗೆ ಬೇರೆ ಜಿಲ್ಲೆಗಳಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಲ್ಲೆಸೆಯಲಾಗಿದ್ದು ಬಸ್‌ಗಳು ಹಾನಿಗೀಡಾಗಿದೆ. ಮಂಗಳೂರಿನ ಡಿಪೋದಿಂದ ತೆರಳಿದ ಎಲ್ಲಾ ಬಸ್ ಗಳು ಇಂದು ಮುಂಜಾನೆ ನಿಗದಿತ ತಾಣ ಮುಟ್ಟಿದ್ದು ಬೇರೆ ಕಡೆಯಿಂದ ಬರಬೇಕಾಗಿದ್ದ ಬಸ್‌ಗಳು ಕೂಡಾ ಮಂಗಳೂರು ಬಸ್ ನಿಲ್ದಾಣ ತಲುಪಿದೆ.
 
ಕೆಎಸ್ಸಾರ್ಟಿಸಿ ಬಸ್ ಮುಷ್ಕರದ ಕರೆಯ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬಸ್ ನಿಲ್ದಾಣಕ್ಕೆ ಬಂದಿರಲಿಲ್ಲ. ಕೆೆಎಸ್ಸಾರ್ಟಿಸಿಯಲ್ಲಿ ಮಂಗಳೂರಿನಿಂದ ಪ್ರಯಾಣ ಬೆಳೆಸುವವರು ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ನಗರದಲ್ಲಿ ಖಾಸಗಿ ಬಸ್‌ಗಳ ಓಡಾಟವಿದ್ದುದ್ದರಿಂದ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗಲಿಲ್ಲ ಎಂದು ತಿಳಿದುಬಂದಿದೆ. 

ಮಂಗಳೂರು ಡಿಪೋದಿಂದ ರಾತ್ರಿ ಹೊರಡಬೇಕಾಗಿದ್ದ ಎಲ್ಲಾ ಬಸ್‌ಗಳು ಸಂಚಾರ ನಡೆಸಿದ್ದು ನಿಗದಿತ ಸ್ಥಳ ತಲುಪಿದೆ. ಇಂದು ಮುಂಜಾನೆಯಿಂದ ಯಾವುದೆ ಬಸ್‌ಗಳು ಮಂಗಳೂರು ಡಿಪೋದಿಂದ ತೆರಳಲಿಲ್ಲ. ಇಂದು ಬಸ್‌ಗಳಲ್ಲಿ ತೆರಳಲು ಬಸ್ ಟಿಕೇಟ್ ಬುಕ್ಕಿಂಗ್ ಮಾಡಿದವರಿಗೆ ಪ್ರಯಾಣ ಬೆಳೆಸಲು ಸಾಧ್ಯವಾಗದೆ ಇರುವುದರಿಂದ ಶೇ.100 ರಷ್ಟು ಮರುಪಾವತಿ ಮಾಡಲಾಗುವುದು.

- ವಿನಾಯಕ್ ಹೆಗ್ಡೆ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು ವಿಭಾಗ

ಇಂದಿನ ಮುಷ್ಕರ ಶೇ.100 ರಷ್ಟು ಯಶಸ್ವಿಯಾಗಿದೆ. ಅಧಿಕಾರಿಗಳು ಹಳೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಕೆಲಸಕ್ಕೆ ಹಾಜರಾಗದಿದ್ದರೆ ಕೆಲವು ನೌಕರರನ್ನು ವಜಾ ಮಾಡುವ ಬೆದರಿಕೆಯನ್ನೊಡ್ಡುತ್ತಿದ್ದಾರೆ. ಈ ರೀತಿ ಮಾಡಿ ಇಲಾಖೆ ಘರ್ಷಣೆಗೆ ಅವಕಾಶ ನೀಡಬಾರದು. ಬೇಡಿಕೆ ಈಡೇರುವ ತನಕ ನಮ್ಮ ಮುಷ್ಕರ ನಿಲ್ಲುವುದಿಲ್ಲ.

 - ಪ್ರವೀಣ್‌ಕುಮಾರ್, ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಫೆಡರೇಶನ್(ಎಐಟಿಯುಸಿ), ಮಂಗಳೂರು ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News