ಕೆಎಸ್ಸಾರ್ಟಿಸಿ ಮುಷ್ಕರ: ಬಂಟ್ವಾಳ ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತ

Update: 2016-07-25 14:41 GMT

ಬಂಟ್ವಾಳ, ಜು.25: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿತು.

ತಾಲೂಕಿನ ಗ್ರಾಮೀಣ ಬಾಗವಾದ ವಾಮದಪದವು, ಸರಪಾಡಿ, ಕಕ್ಯಪದವು,ಬಿಯಪಾದೆ,ಕೂರಿಯಾಳ ಸಹಿತ ಮಂಗಳೂರಿನಿಂದ ಧರ್ಮಸ್ಥಳ ಮಧ್ಯೆ ಸಂಚರಿಸುವ ನಿತ್ಯ ಪ್ರಯಾಣಿಕರು ಮುಷ್ಕರದಿಂದ ತೊಂದರೆಗೊಳಗಾದರು. ಗ್ರಾಮೀಣ ಪ್ರದೇಶದ ಏಕೈಕ ಸಂಪರ್ಕ ವ್ಯವಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ಬಸ್‌ಗಳ ನೌಕರರು ಮುಷ್ಕರಕ್ಕೆ ಇಳಿದಿರುವುದರಿಂದ ಬಸ್‌ಗಳು ತನ್ನ ಓಡಾಟವನ್ನು ಸ್ಥಗಿತಗೊಳಿಸಿದ್ದು ಜನ ಸಾಮಾನ್ಯರು ಪರದಾಡಿದರು.

ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಪರದಾಡುವ ದೃಶ್ಯಗಳು ಕಂಡು ಬಂತು. ಗ್ರಾಮೀಣ ಭಾಗದಲ್ಲಿ ಸರಕಾರಿ ಬಸ್‌ಗಳನ್ನೇ ಅವಲಂಬಿಸಿರುವ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಬಸ್ ಬಾರದೆ ರಸ್ತೆಯಲ್ಲಿ ಕಾಯುತ್ತಿದ್ದ ದೃಶ್ಯವು ಸಾಮಾನ್ಯವಾಗಿತ್ತು ಕೆಲವರು ಖಾಸಗಿ ವಾಹನಗಳನ್ನು ಅವಲಂಬಿಸಿದರು. ಈ ನಡುವೆ ಬಸ್ ಪಾಸನ್ನು ಹೊಂದಿರುವ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಯಿತು.

ಕೆಲವು ಖಾಸಗಿ ವಾಹನಗಳು ಪ್ರಯಾಣಿಕರಿಂದ ದುಬಾರಿ ಬಾಡಿಗೆ ಮೊತ್ತವನ್ನು ವಸೂಲಿ ಮಾಡಿರುವ ಪ್ರಕರಣಗಳೂ ಕೂಡಾ ಬೆಳಕಿಗೆ ಬಂದಿದೆ. ಮುಷ್ಕರದ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಜೀಪು, ಟೆಂಪೊ, ಮ್ಯಾಕ್ಸಿ ಕ್ಯಾಬ್‌ಗಳು ಜನರನ್ನು ತುಂಬಿಸಿ ಪ್ರಯಾಣಿಸುತ್ತಿದ್ದವು. ಸಿಕ್ಕಿದ್ದೇ ಅವಕಾಶ ಎಂಬಂತೆ ಮನ ಬಂದಂತೆ ಪ್ರಯಾಣಿಕರಿಂದ ದರ ವಸೂಲಿ ಮಾಡುತ್ತಿದ್ದರು. ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ಸಿ.ಸಿ ಬಸ್‌ಗಳನ್ನೇ ಅವಲಂಬಿಸಿದರು. ಶಾಲೆಗೆ ರಜೆ ಇಲ್ಲದಿದ್ದರೂ ವಾಹನ ಸೌಲ್ಯವಿಲ್ಲದಿದ್ದರಿಂದ ಮಕ್ಕಳ ಸಂಖ್ಯೆ ಕಡಿಮೆಯಿತ್ತು.

ಕೆಲವು ಖಾಸಗಿ ಶಾಲೆಗಳಲ್ಲಿ ವಾಹನದ ವ್ಯವಸ್ಥೆ ಇದ್ದುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಕೆಲವು ಶಾಲೆಗಳಲ್ಲಿ ಸೋಮವಾರ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆಯೂ ತಿಳಿದು ಬಂದಿದೆ.

ಸಿಬ್ಬಂದಿ ಮುಷ್ಕರವಿದ್ದರೂ ದ.ಕ.ಜಿಲ್ಲೆಯಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಮುಂಜಾನೆವರೆಗೂ ಇದ್ದ ಸಾರಿಗೆ ಚಾಲಕ, ನಿರ್ವಾಹಕರು ಬೆಳಗಿನ ಜಾವ ಡಿಪೊದಿಂದ ತೆರಳಿದ್ದರು. ಹಾಗಾಗಿ ಶಾಲಾ ಕಾಲೇಜಿನ ರಜೆಯ ಕುರಿತಂತೆ ದಿಢೀರ್ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಷ್ಕರದ ನಡುವೆಯೂ ಬಿ.ಸಿ.ರೋಡಿನ ಬಸ್ ತಂಗುದಾಣದಲ್ಲಿರುವ ನಿಯಂತ್ರಣ ಕೊಠಡಿ ತೆರೆದುಕೊಂಡು ಕಾರ್ಯಾಚರಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News