ಬ್ರಹ್ಮರಕೂಟ್ಲು ಟೋಲ್‌ಗೇಟ್‌ನ್ನು ಕೂಡಲೇ ಸ್ಥಳಾಂತರಿಸಲು ಸಚಿವ ರೈ ಆಗ್ರಹ

Update: 2016-07-25 15:07 GMT

ಬಂಟ್ವಾಳ, ಜು.25: ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೂಟ್ಲುವಿನಲ್ಲಿರುವ ಟೋಲ್‌ಗೇಟ್ ಅನ್ನು ತಕ್ಷಣವೇ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ಸೋಮವಾರ ಸಂಜೆ ನಗರ ದರ್ಶನ ಕಾರ್ಯಕ್ರಮದ ಬಳಿಕ ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಅತ್ಯಂತ ಅವೈಜ್ಞಾನಿಕವಾದ ಟೋಲ್ ಗೇಟ್ ಇದ್ದರೆ ಅದು ಬಂಟ್ವಾಳದಲ್ಲಿ ಮಾತ್ರ, ದ್ವಿಮುಖ ಭಾಗಗಳ ವಾಹನಗಳಿಂದ ಸುಂಕ ವಸೂಲಿ ಮಾಡುವ ಕೇಂದ್ರಗಳು ಒಂದೇ ಸ್ಥಳದಲ್ಲಿ ಇರುತ್ತದೆ, ಆದರೆ ಬಂಟ್ವಾಳದಲ್ಲಿ ಮಾತ್ರ ಪ್ರತ್ಯೇಕವಾಗಿ ಮಾಡಲಾಗಿದೆ. ಮಾತ್ರವಲ್ಲದೆ ಇದರ ಮುಂದುವರಿದ ರಸ್ತೆ ಅಗಲ ಕಿರಿದಾಗಿದ್ದು ಇಲ್ಲಿ ಕಾಮಗಾರಿಯೂ ಅಪೂರ್ಣ ಸ್ಥಿತಿಯಲ್ಲಿದೆ. ಈ ಬಗ್ಗೆ ಈಗಾಗಲೇ ನಾಲ್ಕು ಬಾರಿ ಕೇಂದ್ರ ಸಾರಿಗೆ ಸಚಿವರಿಗೆ ಪತ್ರ ಬರೆದು, ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದರು.

ಬಿ.ಸಿ.ರೋಡಿನ ಸರ್ವೀಸ್ ರಸ್ತೆ ತೀರಾ ಹದಗೆಟ್ಟಿದ್ದು, ಕಳಪೆ ರಸ್ತೆಗಳಲ್ಲಿಯೇ ನಂಬರ್ 1 ಎಂದು ಛೇಡಿಸಿದ ಸಚಿವ ರೈ, ನಂ.1 ಸಂಸದ ಎಂದು ಹೇಳುತ್ತಿರುವ ಸಂಸದ ನಳಿನ್ ಕುಮಾರ್ ಬಂಟ್ವಾಳದ ಅಭಿವೃದ್ದಿ ಬಗ್ಗೆ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನಡೆಸಿದ ಬಳಿಕ ಅಭಿವೃದ್ದಿ ಪರಿಶೀಲನೆ ನಡೆಸಿದ್ದು ಸಾಕಷ್ಟು ಕಾರ್ಯಗಳು ಪ್ರಗತಿಯಲ್ಲಿದೆ. ಮುಂದಿನ ಎರಡು ಮೂರು ತಿಂಗಳೊಳಗಾಗಿ ಬಹುತೇಕ ಕಾಮಗಾರಿಗಳು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಒಳಚರಂಡಿ ಯೋಜನೆಯನ್ನು ಮತ್ತೆ 68 ಕೋಟಿ ರೂ.ಅನುದಾನದಲ್ಲಿ ಮುಂದುವರಿಸುವ ಕುರಿತಾಗಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಬಂಟ್ವಾಳ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಾಗಿ ತೀರ್ಮಾನಿಸಲಾಗಿದ್ದು, ಕ್ಯಾಬಿನೆಟ್ ನಲ್ಲಿ ಆಂಗೀಕರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

2 ಕೋಟಿ ರೂ. ವೆಚ್ಚದ ಪಾಲಿಟೆಕ್ನಿಕ್ ಕಾಲೇಜಿನ ಸಂಪರ್ಕ ರಸ್ತೆಗೆ ಟೆಂಡರ್ ಕರೆಯಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗುತ್ತಿದ್ದು, ಬಿ.ಸಿ.ರೋಡಿನ ವಾಹನದಟ್ಟಣೆ ನಿಯಂತ್ರಿಸುವ ಸಲುವಾಗಿ ಕಾಮಾಜೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ ಮೂಲಕ ಪ್ರಸ್ತಾವನೆ ಕಳುಹಿಸಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಎರಡು ಯೋಜನೆಗಳು ಮುಕ್ತಾಯದ ಹಂತದಲ್ಲಿದೆ. ಮೆಟ್ರಿಕ್ ಪೂರ್ವ ಹಾಸ್ಟೆಲ್ ನಿರ್ಮಾಣಕ್ಕೆ ಜಮೀನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಿ.ಸಿ.ರೋಡು ಮುಖ್ಯ ವೃತ್ತದ ಬಳಿಯಿಂದ ಗೂಡಿನ ಬಳಿವರೆಗೆ ವಾಕಿಂಗ್ ಝೋನ್ ನಿರ್ಮಿಸಲು ಯೋಜಿಸಲಾಗಿದೆ ಎಂದರು.

ಈ ಸಂದರ್ಭ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಬಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು, ಸಂಜೀವ ಪೂಜಾರಿ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News