ದೌರ್ಜನ್ಯಕ್ಕೊಳಗಾಗಿ ವರ್ಷವಾದರೂ ಮರಿಚೀಕೆಯಾದ ನ್ಯಾಯ

Update: 2016-07-25 17:21 GMT

ಬೆಳ್ತಂಗಡಿ, ಜು.25: ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಅವರ ಕೈ ಕತ್ತರಿಸಿದ ಪ್ರಕರಣ ನಡೆದು ಒಂದು ವರ್ಷವಾಗುತ್ತಾ ಬಂದಿದ್ದರೂ ಇನ್ನೂ ಈ ಕುಟುಂಬಕ್ಕೆ ನ್ಯಾಯ ಮಾತ್ರ ದೊರಕಿಲ್ಲ.

ಸುಂದರ ಮಲೆಕುಡಿಯ ಅವರ ಎಡ ಕೈ ಕತ್ತರಿಸಿ ಹೋಗಿದ್ದು, ಬೆರಳುಗಳೇ ಇಲ್ಲ. ಇನ್ನು ಬಲ ಕೈಯಲ್ಲಿ ಮೂರು ಬೆರಳುಗಳು ತುಂಡಾಗಿ ಹೋಗಿವೆ. ಕೈಯಿಂದ ಊಟ ಮಾಡಲೂ ಸಾಧ್ಯವಿಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಜಮೀನಿಗೆ ಹಕ್ಕು ಪತ್ರ ಕೊಡುತ್ತೇವೆ, ಅಂಗವಿಕಲ ವೇತನ ನೀಡುತ್ತೇವೆ ಎಂಬಂತಹ ಭರವಸೆಗಳು ದೊರೆತಿದ್ದರೂ ವರ್ಷ ಕಳೆದರೂ ಇದು ಯಾವುದೂ ಈಡೇರಿಲ್ಲ. ಇವರ ಮಗ ಪೂರ್ಣೇಶನ ದುಡಿಮೆಯೇ ಈ ಕುಟುಂಬಕ್ಕೆ ಆಧಾರಸ್ತಂಭವಾಗಿದೆ.

ವರ್ಷದ ಹಿಂದೆ ಜುಲೈ 26ರಂದು ಸಂಜೆಯ ವೇಳೆ ಸುಂದರ ಮಲೆಕುಡಿಯ ಹಾಗೂ ಕುಟುಂಬದವರ ಮೇಲೆ ಸ್ಥಳೀಯ ಭೂ ಮಾಲಕ ಗೋಪಾಲಗೌಡ ಹಾಗೂ ಆತನ ತಂಗಿ ಮತ್ತು ತಂಡ ಹಲ್ಲೆ ನಡೆಸಿತ್ತು. ಕಳೆ ಕತ್ತರಿಸುವ ಯಂತ್ರದೊಂದಿಗೆ ನಡೆದ ದಾಳಿಯಲ್ಲಿ ಸುಂದರ ಮಲೆಕುಡಿಯರು ಎರಡೂ ಕೈಗಳನ್ನೂ ಕಳೆದುಕೊಂಡಿದ್ದಾರೆ. ತಿಂಗಳುಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಸುಂದರ ಮಲೆಕುಡಿಯರು ಎರಡೂ ಕೈಗಳ ಸ್ವಾಧೀನತೆ ಕಳೆದುಕೊಂಡಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಆಸ್ಪತ್ರೆಯ ಖರ್ಚನ್ನು ಮಾತ್ರ ವಹಿಸಿಕೊಂಡಿದೆ.

ದಶಕಗಳ ಹಿಂದೆಯೇ ಇದೇ ಗೋಪಾಲಗೌಡ ನಡೆಸಿದ ಹಲ್ಲೆಯಿಂದಾಗಿ ಸುಂದರ ಮಲೆಕುಡಿಯರ ಪತ್ನಿ ರೇವತಿ ಅವರು ಒಂದು ಕೈಯ ಮೂರು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಇಡೀ ಕುಟುಂಬಕ್ಕೆ ಸುಂದರ ಮಲೆಕುಡಿಯರ ಪುತ್ರ ಪೂರ್ಣೇಶನೇ ಆಧಾರವಾಗಿದ್ದಾರೆ. ಚಿಕಿತ್ಸೆಯನ್ನು ಮುಂದುವರಿಸುವಂತೆ ವೈದ್ಯರು ಹೇಳಿದ್ದಾರೆ. ಆದರೆ ಮಂಗಳೂರಿಗೆ ಹೋಗಲು ಬಸ್‌ಚಾರ್ಜ್‌ಗೂ ಹಣವಿಲ್ಲದ ಈ ಕುಟುಂಬ ಚಿಕಿತ್ಸೆ ಮುಂದುವರಿಸುವುದಾದರೂ ಹೇಗೆ ಎಂದು ಚಿಂತಾಕ್ರಾಂತವಾಗಿದೆ.

ಸುಂದರ ಮಲೆಕುಡಿಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಭಾರೀ ಹೋರಾಟಗಳೇ ನಡೆದಿದ್ದವು. ಕೊನೆಗೂ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇದೀಗ ನ್ಯಾಯಾಲಯದಲ್ಲಿ ಇದೊಂದು ಜಾತಿ ನಿಂದನೆ ಪ್ರಕರಣವಲ್ಲ, ಜಮೀನು ಗಲಾಟೆ ಮಾತ್ರ ಎಂದು ಕೇಸ್ ನಡೆಯುತ್ತಿದೆ. ಪ್ರಭಾವಿಗಳಾಗಿರುವ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಸುಂದರ ಮಲೆಕುಡಿಯ ಮಾತ್ರ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ.

ಕಾಟಾಜೆ ಪರಿಸರದ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ಕುಳಿತಿರುವ ಮಲೆಕುಡಿಯ ಕುಟುಂಬಗಳಿಗೆ ಜಮೀನಿಗೆ ಹಕ್ಕುಪತ್ರ ಇಲ್ಲದಿರುವ ಹಿನ್ನಲೆಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲ ಕುಟುಂಬಗಳಿಗೂ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಯವರ ಸೂಚನೆಯಂತೆ ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿಯಾಗಿ ಜಮೀನಿನ ಅಳತೆ ಕಾರ್ಯವನ್ನೂ ನಡೆಸಿ ಇದು ಅರಣ್ಯ ಜಮೀನಲ್ಲ ಎಂದು ವರದಿಯನ್ನೂ ನೀಡಿತ್ತು. ಒಂದೇ ತಿಂಗಳಿನಲ್ಲಿ ಹಕ್ಕುಪತ್ರ ನೀಡುವ ಭರವಸೆಯನ್ನೂ ಇವರಿಗೆ ನೀಡಲಾಗಿತ್ತು. ಆದರೆ ಇನ್ನೂ ಇವರ್ಯಾರಿಗೂ ಹಕ್ಕುಪತ್ರ ಮಾತ್ರ ದೊರೆತಿಲ್ಲ. ಇದಕ್ಕಾಗಿ ಅವರು ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಕುಟುಂಬಗಳು ಇನ್ನೂ ತಮಗೆ ಜಮೀನಿನ ಒಡೆತನ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಸುಂದರ ಮಲೆಕುಡಿಯರ ಕುಟುಂಬಕ್ಕೆ ಇನ್ನೂ ನ್ಯಾಯ ದೊರಕಿಲ್ಲ. ಅವರಿಗೆ ಕೂಡಲೇ ಅಂಗವಿಕಲ ವೇತನ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಆರೋಪಿಗಳ ಮೇಲೆ ಹಾಕಲಾಗಿದ್ದ ಜಾತಿನಿಂದನೆ ಪ್ರಕರಣವನ್ನು ನ್ಯಾಯಾಲಯ ತೆಗೆದು ಹಾಕಿದೆ. ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಮತ್ತೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆಯಾಗಬೇಕು ಆದರೆ ಭೂಮಾಲಕರ ದೌರ್ಜನ್ಯಗಳು ಕೊನೆಗೊಳ್ಳಲು ಸಾಧ್ಯ.

- ಶೇಖರ ಲಾಯ್ಲ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ.

ನಮಗೆ ಸರಕಾರ ನೀಡಿದ್ದ ಭರವಸೆಗಳು ಯಾವುದೂ ಈಡೇರಿಲ್ಲ. ಜಮೀನಿಗೆ ಹಕ್ಕುಪತ್ರವನ್ನಾದರೂ ನೀಡಲಿ. ಮುಂದಿನ ಚಿಕಿತ್ಸೆಗೆ ನಮ್ಮ ಬಳಿ ಹಣವಿಲ್ಲ. ಸರಕಾರ ನೆರವಾದರೆ ಮಾತ್ರ ಏನಾದರೂ ಮಾಡಲು ಸಾಧ್ಯ.

- ಸುಂದರ ಮಲೆಕುಡಿಯ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News