ಬಂಟ್ವಾಳ: ಬಸ್ಸನ್ನೇರಿ ನಗರ ಪ್ರದಕ್ಷಿಣೆ ಹಾಕಿದ ಸಚಿವ ರಮಾನಾಥ ರೈ !

Update: 2016-07-25 15:48 GMT

ಬಂಟ್ವಾಳ, ಜು.25: ಇದೇ ಮೊದಲ ಬಾರಿಗೆ ಬಂಟ್ವಾಳ ಶಾಸಕ, ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಮಧ್ಯಾಹ್ನ ಅಧಿಕಾರಿಗಳ ದಂಡಿನೊಂದಿಗೆ ಪುರಸಭಾ ವ್ಯಾಪ್ತಿಯಲ್ಲಿ ನಗರ ಪ್ರದಕ್ಷಿಣೆ ಹಾಕುವುದರೊಂದಿಗೆ ಪ್ರಗತಿಯ ಹಂತದಲ್ಲಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.

ನಿಗದಿತ ಸಮಯ ಮಧ್ಯಾಹ್ನ 2:30ಕ್ಕೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಅಬಿವೃದ್ಧಿ ಕಾಮಗಾರಿಗಳ ಕುರಿತು ಸಮಾಲೋಚನೆ ನಡೆಸಿದರು.

ಬಳಿಕ ನೇರವಾಗಿ ನೇತ್ರಾವತಿ ನದಿ ತೀರದ ಬಳಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಪ್ರವಾಸಿ ಮಂದಿರದ ಕಾಮಗಾರಿಯನ್ನು ಪರಿಶೀಲಿಸಿದರು. ಇದೇ ವೇಳೆ ಇಲ್ಲಿ ಅರಣ್ಯ ಇಲಾಖೆಯಿಂದ ಸುಂದರವಾದ ಟ್ರೀ ಪಾರ್ಕ್ ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ನಂತರ ಪ್ರಗತಿ ಹಂತದಲ್ಲಿರುವ 9.91 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆಯ ಬಂಟ್ವಾಳ ಸರಕಾರಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಇಲ್ಲಿ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಶವಾಗಾರ, ಡಯಾಲಿಸಿಸ್ ಕೇಂದ್ರ, ಅಡುಗೆ ಕೋಣೆಯನ್ನು ನಿರ್ಮಿಸಲಾಗುತ್ತಿದೆ ಎಂದರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಅವರು ಪೂರಕ ಮಾಹಿತಿ ನೀಡಿದರು. ಇದರ ಪಕ್ಕದಲ್ಲೇ ಇರುವ ಹಿರಿಯ ಸಾಹಿತಿ ದಿವಂಗತ ಪಂಜೆಮಂಗೇಶ್ವರಾಯರ ಸ್ಮಾರಕ ಭವನ ನಿರ್ಮಾಣಕ್ಕೆ ಕಾದಿರಿಸಲಾದ ನಿವೇಶನದ ಪರಿಶೀಲನೆ ನಡೆಸಿದ ಸಚಿವರು ಈ ಸಂಬಂಧ ಕೆಲವೊಂದು ಬದಲಾವಣೆಗೆ ಸಹಾಯಕ ಕಮಿಶನರ್ ಡಾ. ಅಶೋಕ್‌ರಿಗೆ ಸೂಚಿಸಿದರು.

ಇಲ್ಲಿಂದ ಬಸ್ಸೇರಿದ ಸಚಿವರು ನೇರವಾಗಿ ಜಕ್ರಿಬೆಟ್ಟುವಿನಲ್ಲಿ 50.71 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣದ ಹಂತದಲ್ಲಿರುವ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಾರ್ಯ ಪಾಲಕ ಇಂಜಿನಿಯರ್ ಮಹದೇವ ಹಾಗೂ ಶೋಭಲತಾ ಸಚಿವರಿಗೆ ಪೂರಕ ಮಾಹಿತಿ ನೀಡಿದರು.

ನಂತರ ಬಿ.ಸಿ.ರೋಡಿನ ವೃತ್ತದ ಬಳಿ ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಇದೀಗ ಎಲ್ಲರ ಗಮನ ಸೆಳೆಯುತ್ತಿರುವ ಉದ್ಯಾನವನಕ್ಕೆ ಭೇಟಿ ನೀಡಿ ದುರ್ಗಂಧ ಬೀರುತ್ತಿದ್ದ ನಗರದ ಮಧ್ಯ ಭಾಗ ಇದೀಗ ಸುಗಂಧ ಬೀರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಕೆಲ ಹೊತ್ತುಗಳ ಕಾಲ ಪಾರ್ಕ್‌ನಲ್ಲಿ ವಿಹರಿಸಿದರಲ್ಲದೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು.

ಇಲ್ಲಿಂದ ಬಿ.ಸಿ.ರೋಡ್ ವೃತ್ತದ ಬಳಿ ಖಾಸಗಿ ಬಸ್ ತಂಗುದಾಣ ನಿರ್ಮಿಸುವ ನಿಟ್ಟಿನಲ್ಲಿ ನಿವೇಶನದ ಸ್ಥಳ ಪರಿಶೀಲನೆ ನಡೆಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಾಯಕ ಕಮಿಷನರ್‌ರಿಗೆ ಸೂಚಿಸಿದರು. ನಂತರ ಗೂಡಿನ ಬಳಿಯಲ್ಲಿ ಬಂಟ್ವಾಳ ಟ್ರಾಫಿಕ್ ಠಾಣೆಗೆ ಕಾದಿರಿಸಲಾದ ನಿವೇಶನವನ್ನು ಪರಿಶೀಲಿಸಿದ ಸಚಿವರು ಡಿವೈಎಸ್ಪಿ ರವೀಶ್ ಹಾಗೂ ಸಹಾಯಕ ಕಮೀಷನರ್‌ರಿಂದ ಪೂರಕ ಮಾಹಿತಿ ಪಡೆದುಕೊಂಡರು.

ಅಲ್ಲಿಂದ ನೇರವಾಗಿ ಕೈಕುಂಜೆಯಲ್ಲಿ ಸುಮಾರು 4.39 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಸ್ಕಾಂನ ವಿಬಾಗ ಕಚೇರಿ ಕಟ್ಟಡದ ಕಾಮಗಾರಿ ಪರಿಶೀಲಿಸಿ ಮೆಸ್ಕಾಂ ಅಧಿಕಾರಿ ಉಮೇಶ್ಚಂದ್ರ ಅವರಿಂದ ಪೂರಕ ಮಾಹಿತಿ ಪಡೆದರು. ಬಳಿಕ ಬಿ.ಸಿ.ರೋಡಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಗೊಳ್ಳುತ್ತಿರುವ ಮಿನಿ ವಿಧಾನ ಸೌಧದ ಕಾಮಗಾರಿಯನ್ನು ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಅವರು ಮಿನಿ ವಿಧಾನ ಸೌಧದ ನೀಲ ನಕ್ಷೆಯ ಛಾಯಾ ಚಿತ್ರವನ್ನು ಪ್ರದರ್ಶಿಸಿದರು. ಇಲ್ಲಿಂದ ತಾಪಂ ಕಚೇರಿ ಬಳಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾಯ್ದಿರಿಸಲಾದ ನಿವೇಶನದ ಪರಿಶೀಲನೆ ಪರಿಶೀಲಿಸಿದರು. ಬಳಿಕ 7.39 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಾಮಗಾರಿಯನ್ನು ಪರಿಶೀಲಿಸಿದರು.

ನಂತರ ಬಸ್ಸೆನ್ನೇರಿದ ಸಚಿವರು ಮರಳಿ ಪ್ರವಾಸಿ ಮಂದಿರಕ್ಕೆ ಆಗಮಿಸಿ ಈ ಎಲ್ಲ ಕಾಮಗಾರಿಗಳು ಮುಂದಿನ 3-4 ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದ್ದು ಮುಖ್ಯಮಂತ್ರಿಯವರನ್ನೇ ಕರೆಸಿ ಇದೆಲ್ಲವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಸುದ್ದಿಗಾರಿಗೆ ತಿಳಿಸಿದರು.

ಸಚಿವರೊಂದಿಗೆ ತಹಶೀಲ್ದಾರ್ ಪುರಂದರ ಹೆಗ್ಡೆ, ಕಾರ್ಯನಿರ್ವಹಣಾ ಅಧಿಕಾರಿ ಸಿಪ್ರಿಯನ್ ಮಿರಾಂಡ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಭಟ್, ವಿವಿಧ ಇಲಾಖಾ ಅಧಿಕಾರಿಗಳಾದ ಅರವಿಂದ ಬಿಜೂರು, ಗಣೇಶ್ ಅರಳೀಕಟ್ಟೆ, ರಾಜಶೇಖರ್ ಪುರಾಣಿಕ್, ಉಮೇಶ್ ಭಟ್, ರಘುಚಂದ್ರ ಹೆಬ್ಬಾರ್, ನರೇಂದ್ರ, ದಿವಾಕರ್, ದೀಪಾ ಪ್ರಭು, ಶ್ರೀಧರ್, ಡಾ. ಸಂತೋಷ್, ಚಂದ್ರಶೇಖರ್ ಪಾತೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News