ನರಿಂಗಾನ: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು, ಪೋಷಕರಿಂದ ಧರಣಿ

Update: 2016-07-25 16:04 GMT

ಉಳ್ಳಾಲ, ಜು.25:ನರಿಂಗಾನ ಹಿರಿಯ ಪ್ರಾಥಮಿಕ ಶಾಲೆಯ ಮೂವರು ಶಿಕ್ಷಕರನ್ನು ಹೆಚ್ಚುವರಿ ನೆಲೆಯಲ್ಲಿ ವರ್ಗಾಯಿಸಿರುವ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಶಾಲೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪಾಲಕರು ಶಾಲಾ ಮುಂಭಾಗದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯಲ್ಲಿ 325 ಮಕ್ಕಳಿದ್ದು 13 ಶಿಕ್ಷಕರಿದ್ದರು. ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಲ್ಲಪ್ಪ, ರೀಟಾ ಡಿಸೋಜ ಹಾಗೂ ಮಂಜುನಾಥ ಇವರನ್ನು ಹೆಚ್ಚುವರಿಯಾಗಿ ವಿವಿಧ ಶಾಲೆಗಳಿಗೆ ವರ್ಗಾಯಿಸಲಾಗಿದೆ. ಅಲ್ಲದೆ ಮುಖ್ಯ ಶಿಕ್ಷಕರು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿದ್ದು ಶಾಲೆಯಲ್ಲಿ ನಾಲ್ವರು ಶಿಕ್ಷಕರ ಕೊರತೆ ಎದುರಾಗಲಿದೆ. ನಿವೃತ್ತರ ಸ್ಥಾನದಲ್ಲಿ ಹೊಸ ಶಿಕ್ಷಕರನ್ನು ನೇಮಿಸುವ ಬದಲು ಸರಕಾರ ಇರುವ ಶಿಕ್ಷಕರನ್ನೂ ವರ್ಗಾಯಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡಲಿಪೆಟ್ಟು ನೀಡುತ್ತಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಅಧ್ಯಾಪಕರನ್ನು ಯಾವುದೇ ಕಾರಣಕ್ಕೂ ಹೆಚ್ಚುವರಿಯನ್ನಾಗಿಸಬಾರದು, ವಿಷಯವಾರು ಶಿಕ್ಷಕರು ಇದೇ ಶಾಲೆಯಲ್ಲಿ ಮುಂದುವರಿಯಬೇಕು. 20 ಮಕ್ಕಳಿಗೆ ಓರ್ವ ಶಿಕ್ಷಕ ಎನ್ನುವ ನೆಲೆಯಲ್ಲಿ ನಿಯುಕ್ತಿಗೊಳಿಸಬೇಕು, ದ.ಕ.ಜಿಲ್ಲೆಯನ್ನು ಮಲೆನಾಡು ಪ್ರದೇಶ ಎಂದು ಘೋಷಿಸಬೇಕು ಹಾಗೂ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ದುರಸ್ತಿಪಡಿಸಬೇಕು ಎನ್ನುವ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟಿದ್ದು ತಪ್ಪಿದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಎಸ್‌ಎಫ್‌ಐ ಮುಖಂಡ ಹಂಝ ಮೊಂಟೆಪದವು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕರ್ ಆಳ್ವರಬೆಟ್ಟು, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸಿ.ಎಂ.ಹಸನ್ ಕುಂಞಿ, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯೀಲ್ ಮೀನಂಕೋಡಿ, ಸದಸ್ಯ ಮುರಳೀಧರ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರಾದ ಲಾಡ ಮಹಮ್ಮದ್, ಹಮೀದ್ ಹಾಜಿ, ಸ್ಥಳೀಯರಾದ ಸಂಶುದ್ದೀನ್ ಯು.ಟಿ, ಎಸ್.ಎಂ.ಮುಹಮ್ಮದ್, ನಾರಾಯಣ ಭಟ್, ಹನೀಫ್, ಆಲಿಕುಂಞಿ, ಅಬ್ದುಲ್ ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News