ಉಳ್ಳಾಲ: ಬೈಕ್ ಅಪಘಾತ ಪ್ರಕರಣದ ಗಾಯಾಳುಗಳು ಮೃತ್ಯು
ಉಳ್ಳಾಲ,ಜು.25: ಕುಂಪಲದಲ್ಲಿ ಎರಡು ದಿನಗಳ ಹಿಂದೆ ಬೈಕ್‌ಗೆ ಕಾರ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಡಿದ್ದ ಸವಾರ ಮುಹಮ್ಮದ್ ಆರಿಫ್ (20) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಕುಂಪಲ ನಿವಾಸಿ ಮುಹಮ್ಮದ್ ಆರಿಫ್ ತೊಕ್ಕೊಟ್ಟುನಿಂದ ಮನೆ ಕಡೆ ಹೋಗುತ್ತಿದ್ದ ಸಂದರ್ಭ ಕುಂಪಲದಲ್ಲಿ ಬೈಕ್ ತಿರುಗಿಸುತ್ತಿದ್ದಾಗ ಹಿಂದಿನಿಂದ ಬಂದ ಕಾರ್ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಮುಹಮ್ಮದ್ ಆರಿಫ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇನ್ನೊಂದು ಘಟನೆಯಲ್ಲಿ ಪಾನೀರ್ ಬಳಿ ರವಿವಾರ ಬೈಕ್ ಸ್ಕಿಡ್ ಆಗಿ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದೇವಿಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ದೇವಿಪ್ರಸಾದ್ ರವಿವಾರ ದೇರಳಕಟ್ಟೆ ಕಡೆಯಿಂದ ಮಾಡೂರಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪಾನೀರ್ ಬಳಿ ಬೈಕ್ ಸ್ಕಿಡ್ ಆಗಿ ಲೈಟ್ ಕಂಬಕ್ಕೆ ಢಿಕ್ಕಿಯಾಗಿತ್ತು. ಇದರಿಂದ ದೇವಿಪ್ರಸಾದ್ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.