×
Ad

ಕೇಂದ್ರ, ರಾಜ್ಯ ಸರಕಾರಗಳ ನೀತಿಯನ್ನು ಖಂಡಿಸಿ ಸಿಪಿಎಂನಿಂದ ಧರಣಿ

Update: 2016-07-25 23:34 IST

ಮಂಗಳೂರು, ಜು.25: ಬೆಲೆ ಏರಿಕೆಯನ್ನು ತಡೆಗಟ್ಟಲು, ಸರ್ವರಿಗೂ ಉದ್ಯೋಗವನ್ನು ಒದಗಿಸಲು, ಕನಿಷ್ಟ ಕೂಲಿಯನ್ನು ದಿನಕ್ಕೆ 600ಕ್ಕೆ ಹೆಚ್ಚಿಸಲು, ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಲು ಮೊದಲಾದ ಬೇಡಿಕೆಗಳನ್ನು ಒತ್ತಾಯಿಸಿ ಹಾಗೂ ಕೇಂದ್ರ, ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಮುಖಂಡ ಕೆ.ಆರ್. ಶ್ರೀಯಾನ್, 2 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿ, ಕೇಂದ್ರದ ಬಿಜೆಪಿ ಸರಕಾರ ದೊಡ್ಡ ಸಾಧನೆಯನ್ನು ತಾವು ಮಾಡಿದ್ದೇವೆಂಬಂತೆ 1200 ಕೋಟಿ ರೂ. ಖರ್ಚು ಮಾಡಿ ಪ್ರಚಾರ ನಡೆಸುತ್ತಿದೆ. ವಾಸ್ತವವಾಗಿ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನೀಡಿದ ಯಾವೊಂದು ಭರವಸೆಗಳನ್ನು ಈಡೇರಿಸಿಲ್ಲ. ಬೆಲೆ ಇಳಿಸಿ, ಕಡಿಮೆ ದರದಲ್ಲಿ ಜನರಿಗೆ ಆಹಾರ ವಸ್ತುಗಳನ್ನು ಒದಗಿಸುತ್ತೇವೆ. ವರ್ಷಕ್ಕೆ 2 ಕೋಟಿಯಂತೆ ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಒದಗಿಸುತ್ತೇವೆ. ದೇಶದ ಹೊರಗಿರುವ ಕಪ್ಪು ಹಣವನ್ನು ವಾಪಾಸು ತಂದು ಪ್ರತಿ ಕುಟುಂಬದ ಬ್ಯಾಂಕು ಖಾತೆಗೂ 15 ಲಕ್ಷ ರೂ. ಜಮೆ ಮಾಡುತ್ತೇವೆ. ಭ್ರಷ್ಟಾಚಾರ ಸಂಪೂರ್ಣ ನಿವಾರಿಸುತ್ತೇನೆ ಎಂದು ನೀಡಿದ ಆಶ್ವಾಸನೆಗಳಲ್ಲಿ ಯಾವುದೂ ಈಡೇರಿಲ್ಲ ಎಂದು ಹೇಳಿದರು.

ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ನಾಚಿಕೆಗೆಟ್ಟವರು ಊರಿಗೆ ದೊಡ್ಡವರು ಎಂಬ ತುಳು ಗಾದೆಯಂತಾಗಿದೆ ಕೇಂದ್ರ ಸರಕಾರದ ಸ್ಥಿತಿ. ಹಿಂದೆ ಗುಜರಾತಿನಲ್ಲಿ ಮುಸ್ಲಿಮರ ಮಾರಣಹೋಮ ಮಾಡಿದಂತೆ ಇವತ್ತು ಗುಜರಾತಿನಲ್ಲಿ ದಲಿತರ ಮೇಲೆ ತೀವ್ರ ಹಲ್ಲೆಗಳಾಗುತ್ತಿವೆ. ಬಿಜೆಪಿ ಆಳ್ವಿಕೆಯಲ್ಲಿ ಇತರ ರಾಜ್ಯಗಳಲ್ಲೂ ದಲಿತರು, ಆದಿವಾಸಿಗಳು ಹಾಗೂ ಮುಸ್ಲಿಮರ ಮೇಲೆ ಹಲ್ಲೆ, ಅತ್ಯಾಚಾರಗಳಾಗುತ್ತಿವೆ. ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗರ ಕೊಲೆಯ ಹಿಂದೆ ಹಿಂದೂ ಕೋಮುವಾದಿಗಳ ಕೈಗಳಿವೆ. ಚಿಕ್ಕಮಗಳೂರು ಡಿವೈಎಸ್ಪಿ ಆತ್ಮಹತ್ಯೆಯ ಹಿಂದೆ ಕೋಮುವಾದಿಗಳ ಪಾತ್ರವಿದೆ. ರಾಜ್ಯ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವೂ ತಮ್ಮ ಒಳಗಿನ ಕಚ್ಚಾಟದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು.ಬಿ. ಲೋಕಯ್ಯ, ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಬಿ.ಎಂ.ಭಟ್, ಕೃಷ್ಣಪ್ಪ ಕೊಂಚಾಡಿ ಉಪಸ್ಥಿತರಿದ್ದರು.

ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್‌ಕುಮಾರ್ ಬಜಾಲ್ ವಂದಿಸಿದರು. ಪ್ರತಿಭಟನೆಗೂ ಮೊದಲು ಪಕ್ಷದ ಕಾರ್ಯಕರ್ತರು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News