ಬ್ರಹ್ಮಾವರ: ಗೃಹಮಂಡಳಿ ಜಾಗಕ್ಕೆ ವಿರೋಧ; ಮನವಿ

Update: 2016-07-25 18:23 GMT

ಬ್ರಹ್ಮಾವರ, ಜು.25: ಬ್ರಹ್ಮಾವರ ತಾಲೂಕು ರಚನೆಯ ನಂತರ ಅಭಿವೃದ್ಧಿ ಕಾರ್ಯಕ್ಕೆ ವಾರಂಬಳ್ಳಿ ಗ್ರಾಪಂನ ಇಂದಿರಾ ನಗರದಲ್ಲಿ ಮೀಸಲಿರಿಸಿರುವ 13.20 ಎಕರೆ ಜಾಗದಲ್ಲಿ ಆರು ಎಕರೆ ಜಾಗವನ್ನು ಕರ್ನಾಟಕ ಗೃಹ ಮಂಡಳಿಗೆ ನೀಡಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಉಡುಪಿ ಗ್ರಾಮಾಂತರ ಬಿಜೆಪಿ ನೇತೃತ್ವದಲ್ಲಿ ಸೋಮವಾರ ಬ್ರಹ್ಮಾವರ ಬಸ್ಸು ನಿಲ್ದಾಣದಲ್ಲಿ ಪ್ರತಿ ಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್, ಈ ಆರು ಎಕರೆ ಜಾಗವನ್ನು ಗೃಹ ಮಂಡಳಿಯು ಸರಕಾರಕ್ಕೆ 1.80 ಕೋಟಿ ರೂ.ಗೆ ಪಡೆದುಕೊಂಡು ಇದೀಗ ಸೆಂಟ್ಸ್‌ಗೆ 2.30ಲಕ್ಷ ರೂ.ಗೆ ಮಾರಾಟ ಮಾಡುವ ಮೂಲಕ ವ್ಯವಹಾರಕ್ಕೆ ಇಳಿದಿದೆ. ಬ್ರಹ್ಮಾವರ ತಾಲೂಕು ಘೋಷಣೆಯಾದ ಬಳಿಕ ವಿವಿಧ ಅಭಿವೃದ್ಧಿ ಕಾರ್ಯಗಳಿಗ್ಕೆ ಇಟ್ಟಿರುವ ಜಾಗವನ್ನು ಗೃಹ ಮಂಡಳಿಗೆ ನೀಡುವ ಮೂಲಕ ಸರಕಾರ ಬ್ರಹ್ಮಾವರ ತಾಲೂಕು ರಚನೆಗೆ ತಿಲಾಂಜಲಿ ನೀಡಿದೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಈ ಬಗ್ಗೆ ಗಮನ ಹರಿಸಿ ಗೃಹ ಮಂಡಳಿಗೆ ನೀಡಿರುವ ಜಾಗವನ್ನು ಕೂಡಲೇ ವಾಪಸು ಪಡೆಯಬೇಕು. ಈ ಜಾಗವನ್ನು ಬ್ರಹ್ಮಾವರ ತಾಲೂಕು ರಚನೆಗಾಗಿಯೇ ಮೀಸಲಿರಿಸಬೇಕು. ಗೃಹ ಮಂಡಳಿಗೆ ಬೇರೆ ಕಡೆ ಜಾಗ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಮೆರವಣಿಗೆಯ ಮೂಲಕ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಕಾರರು ಈ ಕುರಿತ ಮನವಿ ಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ್, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ಬಿಜೆಪಿ ಮುಖಂಡರಾದ ಉದಯಕುಮಾರ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ನಯನಾ ಗಣೇಶ್, ಜ್ಞಾನಾ ವಸಂತಶೆಟ್ಟಿ, ಶ್ಯಾಮಲಾ ಕುಂದರ್, ಬಿ.ಎನ್.ಶಂಕರ ಪೂಜಾರಿ, ಉಪೇಂದ್ರ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಸುರೇಶ್ ನಾಯಕ್, ಪ್ರತಾಪ್ ಹೆಗ್ಡೆ, ಸುಧೀರ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ರಾಜು ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News