ಮೋದಿ ಸರಕಾರದಲ್ಲೂ ’ಕೋಲ್ ಗೇಟ್’!
ಹೊಸದಿಲ್ಲಿ, ಜು.26: ಯುಪಿಎ ಸರಕಾರದ ಅವಧಿಯಲ್ಲಿ ವಿವಾದದ ಹೊಗೆ ಎಬ್ಬಿಸಿದ್ದ ಕಲ್ಲಿದ್ದಲು ಹಗರಣ ಇದೀಗ ಮೋದಿ ಸರಕಾರವನ್ನೂ ಸುತ್ತಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ಕಾರ್ಪೊರೇಟ್ ಸಮೂಹಗಳು ಜಂಟಿ ಸಹಯೋಗದ ಉದ್ಯಮ ಅಥವಾ ಗುಂಪು ಮಾಡಿಕೊಂಡು ಟೆಂಡರ್ ಬಿಡ್ ಸಲ್ಲಿಸಿರುವುದರಿಂದ 2015ರ ಮಾರ್ಚ್‌ನಲ್ಲಿ ನಡೆದ ಎರಡು ಸುತ್ತುಗಳ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಹರಾಜು ಕೇವಲ 11 ಗಣಿಗಾರಿಕೆ ಕಂಪೆನಿಗಳಿಗಷ್ಟೇ ಸೀಮಿತವಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ ಆಕ್ಷೇಪಿಸಿದೆ.
ಇದು ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ನೈಸರ್ಗಿಕ ಸಂಪನ್ಮೂಲಗಳ ಪ್ರಥಮ ಇ- ಹರಾಜು ಆಗಿತ್ತು. 2014ರಲ್ಲಿ ಸುಪ್ರೀಂಕೋರ್ಟ್ 204 ಕಲ್ಲಿದ್ದಲು ಗಣಿ ಕ್ಷೇತ್ರ ಹಂಚಿಕೆಯನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಮರುಹರಾಜು ನಡೆದಿತ್ತು.
ಮಂಗಳವಾರ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದ್ದು, ಮೊದಲ ಎರಡು ಸುತ್ತುಗಳ ಬಿಡ್ಡಿಂಗ್ ಬಳಿಕ, ಕಲ್ಲಿದ್ದಲು ಸಚಿವಾಲಯವು ಇಂಥ ಬೆಲೆ ರಿಗ್ಗಿಂಗ್ ವಿರುದ್ಧ ತಡೆ ನಿರ್ಮಿಸಿದೆ ಎಂದು ಹೇಳಲಾಗಿದೆ. ಮೊದಲ ಎರಡು ಸುತ್ತಿನ ಹಂಚಿಕೆಯಲ್ಲಿ ಇಂಥ ಅಕ್ರಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮುಂದೆ ಈ ಬಗ್ಗೆ ಎಚ್ಚರ ವಹಿಸಿ ಅಂತಿಮವಾಗಿ ನವೀನ್ ಜಿಂದಾಲ್ ಸಮೂಹದ ಗೇರ್ ಪ್ಲಾಮಾ-4 ಕ್ಷೇತ್ರದ ಬಿಡ್ಡಿಂಗ್ ತಿರಸ್ಕರಿಸಿತ್ತು. ಎರಡನೆ ಸುತ್ತಿನ ಹಂಚಿಕೆಂುಲ್ಲಿ ವೇದಾಂತ ಸಮೂಹವು 23 ಗಣಿಗಳ ಪೈಕಿ 14 ಗಣಿಗಳಿಗೆ 25 ಬಿಡ್‌ಗಳನ್ನು ಸಲ್ಲಿಸಿತ್ತು. ಆದಿತ್ಯ ಬಿರ್ಲಾ ಗುಂಪು ಎಂಟು ಗಣಿಕ್ಷೇತ್ರಗಳಿಗೆ 15 ಬಿಡ್ ಸಲ್ಲಿಸಿತ್ತು. ಜಿಂದಾಲ್ ಕೂಡಾ ಆರು ಬ್ಲಾಕ್‌ಗಳಿಗೆ 13 ಬಿಡ್ ಸಲ್ಲಿಸಿತ್ತು.
ಬಿಡ್ಡರ್‌ಗಳ ಸಂಖ್ಯೆಯನ್ನು ಮಿತಿಗೊಳಿಸಿ, ಜಂಟಿ ಸಹಭಾಗಿತ್ವದ ಹಾಗೂ ಉಪ ಘಟಕಗಳನ್ನು ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವುದರಿಂದ ನೈಜವಾಗಿ ಏರ್ಪಡಬೇಕಿದ್ದ ಪೈಪೋಟಿ ಉಂಟಾಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಸಿಎಜಿ ವರದಿ ಹೇಳಿದೆ.