ಗೋರಕ್ಷಕರು ನಮ್ಮನ್ನು ಜೀವಂತ ಸುಟ್ಟು ಬಿಡುತ್ತಿದ್ದರು

Update: 2016-07-26 03:09 GMT

ರಜೂಲಾ (ಗುಜರಾತ್), ಜು.26: ಅಮ್ರೇಲಿಯ ರಜೂಲಾ ಪಟ್ಟಣದಲ್ಲಿ ಇತ್ತೀಚೆಗೆ ದಲಿತರ ಮೇಲೆ ಗೋರಕ್ಷಕರು ನಡೆಸಿದ ದಾಳಿಯ ವೇಳೆ, ದಾಳಿಕೋರರು ಏಳು ಮಂದಿ ದಲಿತರನ್ನು ಒಂದು ಕೊಠಡಿಯಲ್ಲಿ ಕೂಡಿಹಾಕಿ ಜೀವಂತವಾಗಿ ಸುಟ್ಟುಹಾಕಲು ಸಂಚು ಹೂಡಿದ್ದರು ಎಂಬ ಆತಂಕಕಾರಿ ವಿಷಯ ಇದೀಗ ಬಹಿರಂಗವಾಗಿದೆ.

ಸ್ವತಃ ಸಂತ್ರಸ್ತರೇ ಈ ಸ್ಫೋಟಕ ವಿಷಯ ಬಹಿರಂಗಗೊಳಿಸಿದ್ದಾರೆ. ದಲಿತ ಸಮುದಾಯದ ಕೆಲ ಮಂದಿ ಪೊಲೀಸರಿಗೆ ಸಕಾಲದಲ್ಲಿ ಮಾಹಿತಿ ನೀಡಿದಾಗ ಅವರು ತಕ್ಷಣ ಬಂದಿದ್ದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಸುಮಾರು 30 ಮಂದಿ ಇದ್ದ ಗೋರಕ್ಷಕರು ಮೇ 22ರಂದು ಕಬ್ಬಿಣದ ಪೈಪ್, ಬೇಸ್‌ಬಾಲ್ ಬ್ಯಾಟ್ ಹಾಗೂ ಖಡ್ಗದಿಂದ ಸುಮಾರು ಎರಡೂವರೆ ಗಂಟೆ ಕಾಲ ದಾಳಿ ನಡೆಸಿದ್ದರು. ಸಂತ್ರಸ್ತರಲ್ಲಿ ಒಬ್ಬರಾದ ಪ್ರವೀಣ್ ಅಲಿಯಾಸ್ ರವಿ ಝಖಾಡ ಈ ಭೀಕರ ಘಟನೆಯನ್ನು ವಿವರಿಸಿ, ನಾಲ್ಕು ಮಂದಿ ಗೋರಕ್ಷಕರು ನಮ್ಮ ಕೈ ಹಾಗೂ ಕಾಲುಗಳನ್ನು ಹಿಡಿದುಕೊಂಡಾಗ ಇತರರು ಬ್ಯಾಟ್ ಹಾಗೂ ಕಬ್ಬಿಣದ ರಾಡ್‌ನಿಂದ ಹೊಡೆಯುತ್ತಿದ್ದರು. ಒಂದು ಒಂದು ಶಬ್ದ ಮಾತನಾಡಿದರೂ, ಮತ್ತಷ್ಟು ಹೊಡೆಯುತ್ತಿದ್ದರು. ಇದು ಸಾಲದೆಂಬಂತೆ, ತಮ್ಮಲ್ಲೇ ಕೆಲವರಿಗೆ ಸೀಮೆ ಎಣ್ಣೆ ತರಲು ಹೇಳಿದರು. ಆ ಸಣ್ಣ ಕೊಠಡಿಯಲ್ಲೇ ನಮ್ಮನ್ನು ಕೂಡಿಹಾಕಿ ಬೆಂಕಿ ಹಚ್ಚುವುದು ಅವರ ಉದ್ದೇಶವಾಗಿತ್ತು. ಇಬ್ಬರು ಸೀಮೆಎಣ್ಣೆ ತರಲು ಅಲ್ಲಿಂದ ಹೋದುದನ್ನು ನೋಡಿದ್ದೇನೆ ಎಂದರು.

ರವಿಯ ತಂದೆ ಅದನ್ನು ನೋಡಿ, ಸಮುದಾಯದ ಇತರ ಮುಖಂಡರಿಗೆ ವಿವರಿಸಿದರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ನಾವು ಜೀವದ ಆಸೆ ಬಿಟ್ಟಿದ್ದೆವು. ಆದರೆ ಪೊಲೀಸರು ಹಾಗೂ ಸಮುದಾಯದ ಮುಖಂಡರು ಸಕಾಲಕ್ಕೆ ಬಂದರು ಎಂದು ಬಲಗೈ ಮುರಿತಕ್ಕೆ ಒಳಗಾಗಿರುವ ಅವರು ಹೇಳಿದರು.
ಘಟನೆ ನಡೆದು ಎರಡು ತಿಂಗಳ ಬಳಿಕ ಕೂಡಾ ಅವರಿಗೆ ನಡೆಯಲು ಆಗುತ್ತಿಲ್ಲ. ಮತ್ತೊಬ್ಬ ಸಂತ್ರಸ್ತ ದಿಲೀಪ್ ಬಬಾರಿಯಾ ಅಂತೂ ಮಧ್ಯರಾತ್ರಿಯಲ್ಲಿ ಎದ್ದು, ನಮ್ಮನ್ನು ಹೊಡೆಯಬೇಡಿ ಎಂದು ಕಿರುಚಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News