ವಿಚಾರಣೆಗೆ ಸಮಯ ವ್ಯರ್ಥ ಬೇಡ, ನನ್ನ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಇದೆ

Update: 2016-07-26 03:18 GMT

ಪಟ್ನಾ, ಜು.26: ಬಿಹಾರದ ಪಟ್ನಾ, ವೈಶಾಲಿ ಹಾಗೂ ಇತರ ಜಿಲ್ಲೆಗಳಲ್ಲಿ 22 ಕೊಲೆ ಮಾಡಿರುವ ಸರಣಿ ಹಂತಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಈತ ವಿಕೃತ ಮನೋಭಾವದವನು ಎಂದು ಹೇಳಲಾಗಿದೆ.

ಅವಿನಾಶ್ ಶ್ರೀವಾಸ್ತವ ಅಲಿಯಾಸ್ ಅಮಿತ್ ಬಂಧಿತ ಆರೋಪಿ. ಈತ ಬಿಹಾರದ ಮಾಜಿ ಶಾಸಕರೊಬ್ಬರ ಮಗನಾಗಿದ್ದು, ಸುಶಿಕ್ಷಿತ. ಬ್ಯಾಂಕಿನಿಂದ ಕಳವು ಮಾಡಲು ಯತ್ನಿಸುತ್ತಿದ್ದಾಗ ಈತನನ್ನು ಬಂಧಿಸಲಾಗಿದೆ. ನನ್ನ ಬಗ್ಗೆ ವಿಚಾರಣೆ ನಡೆಸಲು ಸಮಯ ವ್ಯರ್ಥ ಮಾಡಬೇಡಿ. ಗೂಗಲ್‌ನಲ್ಲಿ, ಸೈಕೊ ಕಿಲ್ಲರ್ ಅಮಿತ್ ಎಂದು ಸರ್ಚ್ ಮಾಡಿ. ನಿಮಗೆ ಉತ್ತರ ಸಿಗುತ್ತದೆ ಎಂದು ಪೊಲೀಸರಿಗೆ ಹೇಳುವ ಮೂಲಕ ಪೊಲೀಸರನ್ನೇ ದಂಗುಬಡಿಸಿದ್ದಾನೆ.

ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಿಂದ ಎಂಸಿಎ ಪದವಿ ಪಡೆದ ಈತ ಐಟಿ ಕಂಪೆನಿಯ ಉದ್ಯೋಗಿಯಾಗಿದ್ದ. 2003ರಲ್ಲಿ ಈತನ ತಂದೆ ಆರ್‌ಜೆಡಿ ಶಾಸಕ ಲಲ್ಲನ್ ಶ್ರೀವಾಸ್ತವ ಹತ್ಯೆಯಾಗುವ ವರೆಗೂ ಉದ್ಯೋಗದಲ್ಲಿದ್ದ ಎಂದು ವೈಶಾಲಿ ಎಸ್ಪಿ ರಾಜೇಶ್ ಕುಮಾರ್ ಹೇಳಿದ್ದಾರೆ.

ತನ್ನ ತಂದೆಯನ್ನು ಹತ್ಯೆ ಮಾಡಿದ ಪಪ್ಪುಖಾನ್ ಎಂಬಾತನ ಮೇಲೆ ಗುಂಡಿನ ಮಳೆಗೆರೆದಿದ್ದ. ಆ ಬಳಿಕ ಸರಣಿ ಹಂತಕನಾಗಿ ರೂಪುಗೊಂಡ. ಈತನಿಂದ ಹತ್ಯೆಯಾದ ನಾಲ್ಕು ಮಂದಿ, ತಂದೆಯ ಹತ್ಯೆಯಲ್ಲಿ ಶಾಮೀಲಾದವರು ಎಂದು ವಿವರಿಸಿದರು.

ಬಾಲಿವುಡ್ ಚಿತ್ರ ಗ್ಯಾಂಗ್ಸ್ ಆಫ್ ವಸ್ಸೆಯ್‌ಪುರ್-2 ಚಿತ್ರರಿಂದ ಪ್ರೇರಿತನಾಗಿದ್ದುದಾಗಿ ಆತ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News