ಇನ್ನು ಮುಂದೆ ನಿಮ್ಮ ವಾಹನಗಳನ್ನು ಬಾಡಿಗೆಗೆ ನೀಡುವಾಗ ಹುಷಾರಾಗಿರಿ

Update: 2016-07-26 08:10 GMT

ಕಾಸರಗೊಡು, ಜು.26: ಗಾಂಜಾ, ಕಳವು-ಕಪ್ಪುಹಣ ಸಾಗಾಟ ಮಾಡುವ ತಂಡಗಳಿಗೆ ಹಾಗೂ ಇತರ ಮಾಫಿಯಾಗಳಿಗೆ ವಾಹನಗಳನ್ನು ಬಾಡಿಗೆಗೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.

ಸಮಾಜಬಾಹಿರ ಕೃತ್ಯಗಳಿಗೆ ಉಪಯೋಗಿಸುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ದೈನಂದಿನ ಅಪರಾಧಗಳು ಹೆಚ್ಚುತ್ತಿವೆ. ಈ ಕುರಿತು ಚರ್ಚಿಸಲು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ನಡೆದ ಟ್ರಾಫಿಕ್ ಅವಲೋಕನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲೆಯಲ್ಲಿ ದ್ವಿಚಕ್ರವಾಹನಗಳು, ಕಾರುಗಳು ಮೊದಲಾಗಿ ಘನ ವಾಹನಗಳು ಹಾಗೂ ಸಣ್ಣ ವಾಹನಗಳನ್ನು ಗಣನೀಯವಾಗಿ ಯಾವುದೇ ದಾಖಲೆಗಳು, ವ್ಯವಸ್ಥೆಗಳು ಇಲ್ಲದೆ ರೆಂಟ್ ಎ ಕಾರ್ ಮೂಲಕವೋ ಅಲ್ಲದೆಯೋ ಬಾಡಿಗೆಗೆ ನೀಡಲಾಗುತ್ತಿದೆ. ಆದರೆ ವಾಹನದ ಮಾಲಕರಿಗೆ ತಿಳಿಯದಂತೆ ಒಂದೇ ವಾಹನ ಹಲವು ದಾಖಲೆಗಳಲ್ಲಿ ವಿವಿಧ ವ್ಯಕ್ತಿಗಳಿಗೆ ಹಸ್ತಾಂತರಿಸಲ್ಪಡುತ್ತಿದೆ. ಇಂತಹ ವಾಹನಗಳನ್ನು ಹೆಚ್ಚಾಗಿ ಗಾಂಜಾ ಸಾಗಾಟಗಾರರು, ಮರಳುಸಾಗಾಟಗಾರರು, ಕಳ್ಳರು ಮೊದಲಾದ ಸಮಾಜದ್ರೋಹಿಗಳು ಉಪಯೋಗಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಂಜೇಶ್ವರ, ಕುಂಬಳೆ, ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದಾಖಲಾದ ಗಾಂಜಾ ಪ್ರಕರಣಗಳಲ್ಲಿ, ಕಳ್ಳತನ ಪ್ರಕರಣಗಳಲ್ಲಿ ಬಾಡಿಗೆಗೆ ಪಡೆದ ವಾಹನಗಳನ್ನು ದುರುಪಯೋಗ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಲವೆಡೆ ಇಂತಹ ವಾಹನಗಳನ್ನು ಉಪಯೋಗಿಸುವ ಆರೋಪಿಗಳು ವಾಹನಗಳು ಅಪಘಾತಕ್ಕೊಳಗಾದರೂ ವಾಹನ ನಿಲ್ಲಿಸದೆ ತೆರಳುವುದೂ ಇಲ್ಲವೇ ವಾಹನ ಉಪೇಕ್ಷಿಸಿ ತೆರಳುವುದು ಕಂಡುಬರುತ್ತಿದೆ. ತಮ್ಮ ವಾಹನವನ್ನು ಯಾರು, ಯಾವ ಅಗತ್ಯಕ್ಕೆ ಉಪಯೋಗಿಸುತ್ತಿದ್ದಾರೆ ಎಂಬುದನ್ನು ತಿಳಿಯುವ ಜವಾಬ್ದಾರಿ ವಾಹನ ಮಾಲಕರದ್ದಾಗಿದೆ. ಕಾನೂನುಬಾಹಿರವಾಗಿ ಬಾಡಿಗೆಗೆ ನೀಡುವ ವಾಹನಗಳು ಅಪರಾಧಿ ಕೃತ್ಯಗಳಲ್ಲಿ ಶಾಮೀಲಾಗಿದ್ದಲ್ಲಿ ವಾಹನ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಅನಧಿಕೃತ ಪಾರ್ಕಿಂಗ್ ಕಾರಣದಿಂದ ಸಂಚಾರದಟ್ಟಣೆ ಅನುಭವಕ್ಕೆ ಬರುವ ಒಂದೆರಡು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಪಾರ್ಕಿಂಗ್ ನಿಯಂತ್ರಣ ವ್ಯವಸ್ಥೆಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾನೂನಿನನುಸಾರವಲ್ಲದ ಫ್ಯಾನ್ಸಿ ನಂಬರ್ ಪ್ಲೇಟ್‌ಗಳು, ಸ್ಟಿಕ್ಕರ್ ಪ್ಲೇಟ್‌ಗಳ ಉಪಯೋಗ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಎರಡು ಲೈನ್‌ಗಳಲ್ಲಿ ನೋಂದಣಿ ಸಂಖ್ಯೆಯನ್ನು ಬರೆಯಬೇಕಿದೆ. ಕಾನೂನು ಉಲ್ಲಂಘಿಸಿ ನಂಬರ್ ಪ್ಲೇಟ್ ನಿರ್ಮಿಸುವ ಸಂಸ್ಥೆಗಳಿಗೆ ನೋಟಿಸ್ ನೀಡಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹೆಲ್ಮೆಟ್, ಸೀಟ್ ಬೆಲ್ಟ್ ಮೊದಲಾದವುಗಳನ್ನು ಧರಿಸದೆ ವಾಹನ ಚಲಾಯಿಸುವವರ ವಿರುದ್ಧ, ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ, ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ಆಪರೆಶನ್ ಶುಭಯಾತ್ರೆಯಂಗವಾಗಿ ಅಪ್ರಾಪ್ತ ಮಕ್ಕಳ ವಾಹನ ಉಪಯೋಗ ತಡೆಗಟ್ಟಲು ತಂದೆ-ತಾಯಿಯಂದಿರಿಗೆ ತಿಳುವಳಿಕಾ ತರಗತಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News