×
Ad

ಗ್ರಾಮಸ್ಥರಿಂದ ಹೆದ್ದಾರಿಯಲ್ಲೇ ಕೃಷಿಕಾರ್ಯ!

Update: 2016-07-26 14:17 IST

ಮಧುಬನಿ, ಜು.26: ಬಿಹಾರದ ಮಧುಬನಿ ಜಿಲ್ಲೆಯ ಗಂಗೌರ್ ಗ್ರಾಮದ ಜನರು ತಮ್ಮ ಗ್ರಾಮದ ಪ್ರಮುಖ ರಸ್ತೆಯೊಂದರ ದುಸ್ಥಿತಿಯನ್ನು ಪ್ರತಿಭಟಿಸಲು ರಾಷ್ಟ್ರೀಯ ಹೆದ್ದಾರಿಯಲ್ಲೇ ಕೃಷಿ ಚಟುವಟಿಕೆ ನಡೆಸಿ ಅಧಿಕಾರಿಗಳಿಗೆ ಸಡ್ಡು ಹೊಡೆದಿದ್ದಾರೆ. ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ತಾವು ಮಾಡಿದ ಸತತ ಮನವಿಗಳಿಗೆ ಸ್ಪಂದಿಸದೇ ಇದ್ದ ಸ್ಥಳೀಯಾಡಳಿತ ಹಾಗೂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಅವರು ಇಂತಹ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.

ಚಕಿಯಾದಿಂದ ಆರಂಭಗೊಂಡು ತಾಮರ್ಹಿ ಹಾಗೂ ಜಯನಗರ ಆಗಿ ನರಹಿಯಾದಲ್ಲಿ ಕೊನೆಗೊಳ್ಳುವ ರಾಷ್ಟ್ರೀಯ ಹೆದ್ದಾರಿ 104ರ 160 ಕಿ.ಮೀ. ಉದ್ದದ ರಸ್ತೆಯ ದಯನೀಯ ಸ್ಥಿತಿಯಿಂದ ಹಲವು ವರ್ಷಗಳಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ರಸ್ತೆಯಲ್ಲಿ ಮಳೆಗಾಲದಲ್ಲಿ ನೀರು ನಿಂತು ಹಲವಾರು ಅಪಘಾತಗಳಿಗೂ ಕಾರಣವಾಗಿದೆಯಲ್ಲದೆ ಪಾದಚಾರಿಗಳಿಗೂ ಸಂಚರಿಸಲು ಅಸಾಧ್ಯವಾಗಿದೆ.

ಈ ರಸ್ತೆಯ ಕೆಲವೊಂದು ಕಡೆ ಹೊಂಡಗಳು ಎರಡು-ಮೂರು ಅಡಿಗಳಷ್ಟು ಆಳವಾಗಿವೆ ಎಂದು ಗ್ರಾಮಸ್ಥರು ವಿವರಿಸುತ್ತಾರಲ್ಲದೆ, ಭಾರತ-ನೇಪಾಳ ಗಡಿಗೆ ಸಮಾನಾಂತರ ರಸ್ತೆ ಇದಾಗಿರುವುದರಿಂದ ಇದೊಂದು ಮಹತ್ವದ ಹೆದ್ದಾರಿಯಾಗಿದ್ದರೂ ಇದನ್ನು ದುರಸ್ತಿಗೊಳಿಸುವ ಗೋಜಿಗೆ ಆಡಳಿತ ಹೋಗಿಲ್ಲ ಎಂದು ದೂರುತ್ತಾರೆ. ಹತ್ತಿರದ ಸುಮಾರು 1000 ಗ್ರಾಮಗಳಿಗೆ ಇದುವೇ ಪ್ರಮುಖ ಸಂಪರ್ಕ ರಸ್ತೆಯಾಗಿದೆಯೆನ್ನುವುದನ್ನೂ ಅವರು ವಿವರಿಸುತ್ತಾರೆ.

ಗ್ರಾಮಸ್ಥರ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಹರ್ಲಖಿ ತಾನು ಈ ಬಗ್ಗೆ ಈಗಾಗಲೇ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದ್ದು ಅಲ್ಲಿಂದ ಅನುಮತಿ ದೊರೆತರೆ ಕನಿಷ್ಠ ಹೊಂಡಗಳನ್ನಾದರೂ ಮುಚ್ಚುವ ಕಾರ್ಯ ಕೈಗೊಳ್ಳಬಹುದು ಎಂದಿದ್ದಾರೆ.

ಆರ್‌ಎಲ್‌ಎಸ್‌ಪಿಯ ಸ್ಥಳೀಯ ಶಾಸಕ ಸುಧಾಂಶು ಶೇಖರ್, ಈ ರಸ್ತೆಯನ್ನು ದುರಸ್ತಿ ಪಡಿಸಲಾಗುವುದು ಎಂದು ಹೇಳಿದ್ದಾರಾದರೂ, ದುರಸ್ತಿ ಕಾರ್ಯವನ್ನು ಆರು ತಿಂಗಳ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ. ಕೇಂದ್ರ ಸರಕಾರ ಹಾಗೂ ಬಿಹಾರ ಸರಕಾರದ ನಡುವೆ ಹೊಂದಾಣಿಕೆಯ ಕೊರತೆಯೇ ರಸ್ತೆ ದುರಸ್ತಿಯಾಗದೇ ಇರಲು ಕಾರಣವೆಂದು ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News