×
Ad

ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕ- ಮಾಲಕರಿಗೆ ಕಿರುಕುಳ ಆರೋಪ

Update: 2016-07-26 16:45 IST

ಮಂಗಳೂರು, ಜು.26: ಆ್ಯಪ್ ಆಧಾರಿತ ಓಲಾ ಮತ್ತು ಊಬರ್ ಕಂಪನಿಗಳ ಅಡಿಯಲ್ಲಿ ದುಡಿಯುತ್ತಿರುವ ಟ್ಯಾಕ್ಸಿ ಚಾಲಕರ/ ಮಾಲಕರಿಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ನಿರಂತರ ಕಿರುಕುಳ ಹಾಗೂ ದಬ್ಬಾಳಿಕೆ ನಡೆಸುತ್ತಿವೆ ಎಂದು ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಡ್ರೈವರ್ಸ್ ಮತ್ತು ಓನರ್ಸ್ ಅಸೋಸಿಯೇಶನ್ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಅಸೋಸಿಯೇಶನ್ ಪರವಾಗಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ನಗರದ ರೈಲ್ವೇ ಸ್ಟೇಷನ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕ ಮಾಲಕರಿಗೆ ಹೆಚ್ಚಿನ ಕಿರುಕುಳ ನೀಡಲಾಗುತ್ತಿದೆ ಎಂದರು.

ಅಲ್ಲಿನ ಪಾರ್ಕಿಂಗ್ ಸ್ಥಳವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿರುವ ಪರಿಣಾಮ ಈ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇತ್ತೀಚೆಗೆ ಜಿಲ್ಲಾಧಿಕಾರಿ ಅದ್ಯಕ್ಷತೆಯಲ್ಲಿ ನಡೆದ ಆ್ಯಪ್ ಆಧಾರಿತ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಾಡಿರುವ ಮನವಿಯನ್ನು ನೆಪವಾಗಿಟ್ಟುಕೊಂಡು ಆನ್‌ಲೈನ್‌ನಲ್ಲಿ ನಕಲಿ ಬುಕ್ಕಿಂಗ್ ಮಾಡಿ ವಾಹನವೇರಿ ಬೆದರಿಕೆ ಹಾಕುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವ ಕಾರ್ಯ ನಡೆಯುತ್ತಿದೆ.

ಓಲಾ ಮತ್ತು ಉಬೆರ್ ಕಂಪನಿಯು ಕಾನೂನು ಬಾಹಿರವಾಗಿ ಕಾರ್ಯಚರಿಸುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಸತೀಶ್ ಎನ್. ಹಾಗೂ ಇತರರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆ ಆ್ಯಪ್ ಆಧಾರಿತ ಟ್ಯಾಕ್ಸಿಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವ ಸರಕಾರದ ಕ್ರಮದ ವಿರುದ್ಧ ಸದ್ರಿ ಕಂಪನಿಗಳು ಸಲ್ಲಿಸಿದ್ದ ಮೇಲ್ಮನವಿಗೆ ರಾಜ್ಯ ಹೈಕೋರ್ಟ್ ಪ್ರಕರಣ ಮುಗಿಯುವ ತನಕ ಯಾವುದೇ ಕ್ರಮ ಕೈಗೊಳ್ಳದಂತೆ ತಾತ್ಕಾಲಿಕ ಆದೇಶ ನೀಡಿದೆ. ಹಾಗಿದ್ದರೂ ಜಿಲ್ಲಾಧಿಕಾರಿಯವರು ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದು, ನ್ಯಾಯಾಂಗ ನಿಂದನೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ಹೇಮಂತಂ, ಪ್ರಧಾನ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಕೋಶಾಧಿಕಾರಿ ಅರವಿಂದ ಭಟ್, ರಾಮಚಂದ್ರ, ಮುನವ್ವರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News