ಕದಿಕಡ್ಕ ಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕರಣ: ಬಿಇಒ ಕಚೇರಿಯಲ್ಲಿ ಮಾತುಕತೆ

Update: 2016-07-26 13:01 GMT

ಸುಳ್ಯ, ಜು.26: ಕದಿಕಡ್ಕ ಶಾಲೆಯ ಇಬ್ಬರು ಹೆಚ್ಚುವರಿ ಶಿಕ್ಷರನ್ನು ವರ್ಗಾವಣೆ ಮಾಡಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಊರವರು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬಿಇಒ ಅವರೊಂದಿಗೆ ಮಾತುಕತೆ ನಡೆಸಿದರು.

ಶಾಲೆಯಲ್ಲಿ 103 ವಿದ್ಯಾರ್ಥಿಗಳಿದ್ದು, 6 ಮಂದಿ ಶಿಕ್ಷಕರಿದ್ದರು. ಅವರಲ್ಲಿ ಒಬ್ಬರನ್ನು ಸಚಿವರ ಶಿಫಾರಸ್ಸಿನಂತೆ ಡಿಡಿಪಿಐ ಬೇರೆಡೆಗೆ ನಿಯೋಜನೆ ಮಾಡಿದ್ದರು. ಉಳಿದಂತೆ ಗಣಿತ ಹಾಗೂ ವಿಜ್ಞಾನ ಶಿಕ್ಷಕರನ್ನು ವಾರದ ಹಿಂದೆ ವರ್ಗಾವಣೆ ಮಾಡಿದ್ದರಿಂದ ಈಗ ಶಿಕ್ಷಕರ ಸಂಖ್ಯೆ ಮೂರಕ್ಕೆ ಇಳಿದಿದೆ. ಇಬ್ಬರು ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಎಸ್‌ಡಿಎಂಸಿ ಹಾಗೂ ಪೋಷಕರು ಕಳೆದ ಶನಿವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದರು.

ಜುಲೈ 26ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮಾತುಕತೆ ನಡೆಸುವುದಾಗಿ ಬಿಇಒ ಭರವಸೆ ನೀಡಿದ್ದರು. ಅದರಂತೆ ಮಂಗಳವಾರ ನಡೆದ ಮಾತುಕತೆ ವೇಳೆ ಎಸ್‌ಡಿಎಂಸಿಯವರು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು ಡಿಡಿಪಿಐ. ಅವರು ಅವರೇ ಇದನ್ನು ತಡೆಹಿಡಿಯಬೇಕು. ಈ ಕುರಿತು ಅವರಿಗೆ ನೀವು ಕೊಟ್ಟ ಅಹವಾಲನ್ನು ಕಳುಹಿಸಿಕೊಡುತ್ತೇನೆ ಎಂದು ಬಿಇಒ ಕೆಂಪಲಿಂಗಪ್ಪ ಹೇಳಿದರು.

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆ ಮಾಡಿರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. 103 ಮಕ್ಕಳ ಪೈಕಿ ಕಳೆದೆಡು ದಿನಗಳಿಂದ 80 ಮಕ್ಕಳು ಮಾತ್ರ ಹಾಜರಾಗುತ್ತಿದ್ದಾರೆ. ಶಿಕ್ಷಕರ ವರ್ಗಾವಣೆಯನ್ನು ತಡೆಯದಿದ್ದರೆ ಎಲ್ಲಾ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿಯುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಪೋಷಕರು ಹೇಳಿದರು.

ಕೆಮನಬಳ್ಳಿ ಶಾಲೆಯಲ್ಲಿ ಮೂರು ಮಕ್ಕಳಿದ್ದು, ಅದನ್ನು ಕದಿಕಡ್ಕ ಶಾಲೆಗೆ ವಿಲೀನ ಮಾಡಿದರೆ ಅಲ್ಲಿನ ಶಿಕ್ಷಕಿಯನ್ನು ಇಲ್ಲಿಗೆ ವರ್ಗಯಿಸಬಹುದು ಎಂಬ ಸಲಹೆಗೆ ರವಿರಾಜ್ ಗಬ್ಬಲಡ್ಕ ವಿರೋಧ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಚ್.ಅಬ್ದುಲ್ ಖಾದರ್, ಉಪಾಧ್ಯಕ್ಷ ವಿಜಯ ಕಾಳಮನೆ, ಸದಸ್ಯರಾದ ಕೃಷ್ಣ ಮುರೂರು, ಶೇಷಪ್ಪನಾಯ್ಕ, ಶೀಲಾವತಿ ಮಹಾಬಲಡ್ಕ, ಈಶ್ವರಿ ಮಹಾಬಲಡ್ಕ, ರಘು ಕಲ್ಲಮುರ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಕೆ.ಮೊಯ್ದೀನ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಬಾಬು, ಪೋಷಕರಾದ ಚಂದ್ರಶೇಖರ ಕಾಳಮನೆ, ಸಂಜೀವ ಕಲ್ಲಮುರ, ಅನ್ನಪೂರ್ಣ ಮಹಾಬಲಡ್ಕ, ಭಾಗೀರಥಿ ಕಲ್ಲಮುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News