ಯುವಕರು ಸೇನೆಗೆ ಸೇರಲು ಮುಂದಾಗಬೇಕು: ಕಾರ್ಗಿಲ್ ವೀರಯೋಧ ಪ್ರವೀಣ್ ಕರೆ
ಉಳ್ಳಾಲ, ಜು.26: ಕುತ್ತಾರುವಿನ ದುರ್ಗಾವಾಹಿನಿ ಮಹಿಳಾ ಮಂಡಳಿ ಸಭಾಗೃಹದಲ್ಲಿ ಮಂಗಳವಾರ ಕರಾವಳಿ ಸಾಂಸ್ಕೃತಿಕ ಪರಿಷತ್ ಉಳ್ಳಾಲದ ವತಿಯಿಂದ ನಡೆದ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಶತ್ರು ರಾಷ್ಟ್ರದ ಸೇನೆಯೊಂದಿಗೆ ಸೆಣಸಿದ್ದ ಮಂಗಳೂರು ಬೋಳೂರಿನ ನಿವೃತ್ತ ಯೋಧ ಪ್ರವೀಣ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರವೀಣ್, ಹುಟ್ಟು ಇದ್ದ ಮೇಲೆ ಸಾವು ಕೂಡಾ ನಿಶ್ಚಿತವಾಗಿಯೇ ಇದೆ. ಅಂತಹ ಸಾವು ನಮಗೆ ಯಾವ ಗಳಿಗೆಯಲ್ಲೂ ಬರಬಹುದು. ಯುವಕರು ಯಾವುದೋ ಅರ್ಥಹೀನ ಕಾರಣಗಳಿಗೆ ಅಮಾನುಷವಾಗಿ ಬೀದಿ ಹೆಣವಾಗುವುದಕ್ಕಿಂತ ಭಾರತೀಯ ಸೇನೆಗೆ ಸೇರಿ ತಾಯಿ ಭಾರತಿಯ ರಕ್ಷಣೆಗಾಗಿ ಪ್ರಾಣ ಬಲಿದಾನ ನೀಡಿದರೆ ಸತ್ತ ನಂತರವೂ ಅಮರರಾಗುವ ಸುಯೋಗ ದೊರೆಯುವುದು ಎಂದು ಅಭಿಪ್ರಾಯಪಟ್ಟರು.
ಯುವಕರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಲು ಉತ್ಸಾಹ ಮೈಗೂಡಿಸುವುದರ ಜೊತೆಗೆ ಯುವಕರನ್ನು ಸೇನೆಗೆ ಸೇರುವಂತೆ ಬಂಧು,ಬಾಂಧವರು,ಸ್ನೇಹಿತರು ಬೆನ್ನು ತಟ್ಟಿ ಪ್ರೋತ್ಸಾಹಿಸುವಂತಾಗಬೇಕೆಂದು ಕರೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಸೈನ್ಯದೊಂದಿಗೆ ರಣಭೂಮಿಯಲ್ಲಿ ಜೀವದ ಹಂಗು ತೊರೆದು ಹೋರಾಡಿ ಬದುಕುಳಿದ ಸೈನಿಕರಲ್ಲಿ ಪ್ರವೀಣ್ ಕೂಡಾ ಒಬ್ಬರಾಗಿದ್ದು,ಯುದ್ಧದಲ್ಲಿ ದೇಹಕ್ಕೆ ಹೊಕ್ಕಿದ್ದ ಮದ್ದುಗುಂಡುಗಳಿಂದ ಅವರ ದೇಹದ ಒಂದು ಪಾರ್ಶ್ವ ಈಗಲೂ ಜರ್ಝರಿತವಾಗಿದೆ. ಇದಲ್ಲದೆ ಅವರ ಎರಡು ವರುಷದ ಹೆಣ್ಣುಮಗು ವೃದ್ಧಿಯು ಹುಟ್ಟು ವಿಕಲಾಂಗೆಯಾಗಿದ್ದು, ಅವಳ ಪಾಲನೆಗಾಗಿ ಪ್ರವೀಣ್ ಪತ್ನಿಯೂ ಉಪನ್ಯಾಸಕಿ ಕೆಲಸ ಬಿಟ್ಟು ಮನೆಯಲ್ಲೇ ಉಳಿದಿದ್ದು ಕೌಟುಂಬಿಕ ವಿಚಾರದಲ್ಲಿ ಮಾನಸಿಕವಾಗಿ ಎದೆಗುಂದುವಂತಾಗಿದೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಫ್ಯಾಕ್ಸ್ ಮುಖಾಂತರ ವಿಜ್ಞಾಪನಾ ಪತ್ರ ರವಾನಿಸಿ ಕುಟುಂಬಕ್ಕೆ ಕೇಂದ್ರ ಸರಕಾರದಿಂದ ಸೂಕ್ತ ನೆರವು ನೀಡುವಂತೆ ಕೋರುವುದಾಗಿ ಹೇಳಿದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶಕ ಪಿ.ಎಸ್. ಪ್ರಕಾಶ್, ಮಾಜಿ ಶಾಸಕ ಜಯರಾಮ್ ಶೆಟ್ಟಿ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ದೇರಳಕಟ್ಟೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ್ ಕಾಯರ್‌ಪಳಿಕೆ, ಮಾಜಿ ಮಂಡಲ ಪ್ರಧಾನ ಪರಮೇಶ್ವರ ಶೆಟ್ಟಿ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣ, ಮುಖಂಡರಾದ ಜೀವನ್ ಕೆರೆಬೈಲು, ಹರೀಶ್ ಪೂಜಾರಿ ಅಂಬ್ಲಮೊಗರು ಉಪಸ್ಥಿತರಿದ್ದರು.