ಆ.1ರಿಂದ 21ರವರೆಗೆ ಭಟ್ಕಳದಲ್ಲಿ ರೈಲ್ವೆ ಹಳಿಯಲ್ಲಿ ಚಲಿಸುವ ಆಸ್ಪತ್ರೆ
Update: 2016-07-26 21:31 IST
ಉಡುಪಿ, ಜು.26: ಜಗತ್ತಿನಲ್ಲೇ ವಿಶಿಷ್ಟವಾದ ರೈಲು ಹಳಿಗಳ ಮೇಲೆ ಚಲಿಸುವ ಆಸ್ಪತ್ರೆ ‘ಲೈಫ್‌ಲೈನ್ ಎಕ್ಸ್‌ಪ್ರೆಸ್’ ಇದೇ ಆ.1ರಿಂದ 21ರವರೆಗೆ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಿಸಲಿದೆ. ಕೊಂಕಣ ರೈಲ್ವೆ, ಕೇಂದ್ರಿಯ ರೈಲ್ವೆಯ ಸಹಯೋಗದೊಂದಿಗೆ ಇಂಡಿಯಾ ಫೌಂಡೇಷನ್‌ನ ಈ ಲೈಫ್‌ಲೈನ್ ಎಕ್‌ಸ್ಪ್ರೆಸ್ ಕಾರ್ಯನಿರ್ವಹಿಸಲಿದೆ.
ಲೈಫ್‌ಲೈನ್ ಎಕ್ಸ್‌ಪ್ರೆಸ್ 20 ದಿನಗಳ ಕಾಲ ಭಟ್ಕಳದಲ್ಲಿರುವ ಇರುವ ಸಮಯದಲ್ಲಿ ಭಟ್ಕಳ ಆಸುಪಾಸಿನ ಗ್ರಾಮಗಳಲ್ಲಿರುವ ಬಡ ಹಾಗೂ ಅಗತ್ಯ ರೋಗಿಗಳಿಗೆ ಉಚಿತ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿಯನ್ನು ಒದಗಿಸುತ್ತದೆ.
ಕ್ಯಾಟರ್ಯಾಕ್ಟ್, ಮೂಳೆ ನೋವು, ಕಿವಿ, ಹಲ್ಲು, ತುಟಿಯ ನೋವಿರುವ ಅಸ್ವಸ್ಥರು ಇಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯನ್ನು ದೇಶದ ಖ್ಯಾತನಾಮ ವೈದ್ಯರಿಂದ ಮಾಡಿಸಿಕೊಳ್ಳಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.