ಪುರಸಭಾ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಕಾರ್ಯಕಲ್ಪ: ಶಾಸಕ ಜೈನ್

Update: 2016-07-26 18:21 GMT

ಮೂಡುಬಿದಿರೆ, ಜು.26: ಮಕ್ಕಳಿಗೆ ಶಿಕ್ಷಣವನ್ನು ನೀಡಿ ಉತ್ತಮ ಭವಿಷ್ಯವನ್ನು ರೂಪಿಸುವ ವಾತಾವರಣ ಇರುವುದು ಅಂಗನವಾಡಿ ಕೇಂದ್ರಗಳಲ್ಲಿ. ಬಡಮಕ್ಕಳು ಶಿಕ್ಷಣವನ್ನು ಪಡೆಯಲು ಬರುವ ಈ ಅಂಗವಾಡಿ ಕೇಂದ್ರಗಳು ಮೂಲೂತ ಸೌಕರ್ಯಗಳೊಂದಿಗೆ ಉತ್ತಮ ಕಟ್ಟಡವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪುರಸಭೆಯು ಕಾರ್ಯಕಲ್ಪ ನೀಡುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಲಹೆ ನೀಡಿದರು.

ಅವರು 2016-17ನೆ ಸಾಲಿನ ಪುರಸಭೆ ನಿಧಿ 2.84 ಲಕ್ಷ ರೂ. ವೆಚ್ಚದಲ್ಲಿ ಸುಭಾಷ್‌ನಗರದ ಪುಚ್ಚೇರಿಕಟ್ಟೆ ಅಂಗನವಾಡಿ ಕೇಂದ್ರದ ನವೀಕೃತ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಕನ್ನಡದ ಜತೆಗೆ ಇಂಗ್ಲೀಷ್ ಭಾಷೆಗಳನ್ನು ಕಲಿಸಿ ಇಂಗ್ಲೀಷ್ ಮಾಧ್ಯಮದ ಮಕ್ಕಳಂತೆ ಬೆಳೆಸಬೇಕಾಗಿದೆ. ಹಾಗೂ ಮುಂದೆಯೂ ಮಕ್ಕಳು ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸಬೇಕಾಗಿದೆ ಎಂದು ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಿದರು.

ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮಾತನಾಡಿ ವ್ಯಾಪ್ತಿಯಲ್ಲಿರುವ 3 ಅಂಗನವಾಡಿ ಕೇಂದ್ರಗಳಿಗೆ ಈಗಾಗಲೇ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸಜ್ಜಿತವಾದ ಕಟ್ಟಡಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ತಿಳಿಸಿದರು.

ಪುರಸಭಾ ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸದಸ್ಯರಾದ ರತ್ನಾಕರ ದೇವಾಡಿಗ, ಪಿ.ಕೆ.ಥೋಮಸ್, ಸುಪ್ರಿಯಾ ಶೆಟ್ಟಿ, ರಾಜೇಶ್ ಕೋಟೆಗಾರ್, ವಿನೋದ್ ಸೆರಾವೋ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ, ಶಿಕ್ಷಣ ಇಲಾಖೆಯ ರಾಜಶ್ರೀ, ಅಂಗನವಾಡಿ ಮೇಲ್ವಿಚಾರಕಿ ರತಿ ಶೆಟ್ಟಿ, ಗೋಪಾಲ್ ಶೆಟ್ಟಿಗಾರ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರುಕ್ಕಯ್ಯ ಪೂಜಾರಿ, ಪುರಸಭಾ ನಾಮನಿದೇರ್ಶಿತ ಸದಸ್ಯ ಇಕ್ಬಾಲ್ ಕರೀಂ, ನೆಲ್ಲಿಕಾರು ಗ್ರಾ.ಪಂ ಸದಸ್ಯ ಹರೀಶ್ ಆಚಾರ್ಯ ಬಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ವಿಜಯಾ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News