ಪುತ್ತೂರು: ರಿಕ್ಷಾ ಚಾಲಕರಿಂದ ಶ್ರಮದಾನ
ಪುತ್ತೂರು,ಜು.27: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ರಿಕ್ಷಾ ಚಾಲಕರು ಬುಧವಾರ ಶ್ರಮದಾನ ನಡೆಸಿದರು.
ಬಸ್ ನಿಲ್ದಾಣದ ಉತ್ತರ ದಿಕ್ಕಿನ ಪ್ರವೇಶ ದ್ವಾರದ ಎದುರು ನೂತನವಾಗಿ ರಿಕ್ಷಾ ಪಾರ್ಕಿಂಗ್ ರಚನೆಯಾಗಿದ್ದು, ಬಸ್‌ಸ್ಟ್ಯಾಂಡ್ ಕ್ಯೂ ಎಂದೇ ಹೆಸರು ಪಡೆದುಕೊಂಡಿದೆ, ಈ ಪಾರ್ಕಿಂಗ್ ಜಾಗದಲ್ಲಿ ಹುಲ್ಲು ಬೆಳೆದಿದ್ದು, ಸಮತಟ್ಟು ಜಾಗ ಇಲ್ಲದ ಕಾರಣ ಅಗಲ ಕಿರಿದಾದ ಸ್ಥಳದಲ್ಲಿ ರಿಕ್ಷಾ ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದರು. ನಿತ್ಯ ಬಸ್‌ಗಳ ಓಡಾಟ, ಜನ ಸಂಚಾರ ದಟ್ಟಣೆ ಇರುವ ಕಾರಣ ಮತ್ತು ರಿಕ್ಷಾ ಚಾಲಕರು ಕೂಡ ಕಾರ್ಯದೊತ್ತಡದಲ್ಲಿರುವ ಕಾರಣ ಇಲ್ಲಿನ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ.
ಇದೀಗ ಬಸ್ ಮುಷ್ಕರವಿರುವ ಕಾರಣ ಇಲ್ಲಿ ಜನ ಸಂಚಾರ, ವಾಹನ ಸಂಚಾರ ವಿರಳವಾಗಿದೆ. ಈ ಪಾರ್ಕಿಂಗ್‌ನ ಚಾಲಕರಿಗೆ ಕೆಲಸದ ಒತ್ತಡವೂ ಇಲ್ಲ. ಈ ಸಂದರ್ಭ ಸದುಪಯೋಗ ಮಾಡಿಕೊಂಡ ಚಾಲಕರು ಒಟ್ಟು ಸೇರಿ ಬುಧವಾರ ಶ್ರಮದಾನ ನಡೆಸಿ ಪಾರ್ಕಿಂಗ್ ಸ್ಥಳವನ್ನು ಸುಂದರಗೊಳಿಸಿದರು. ಸ್ನೇಹ ಸಂಗಮ ರಿಕ್ಷಾ ಚಾಲಕರ ನೇತೃತ್ವ ಮತ್ತು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆದ ಶ್ರಮದಾನದಲ್ಲಿ ಇತರ ಸಂಘಟನೆಗಳ ಚಾಲಕರು ಕೂಡ ಮುಕ್ತ ಮನಸ್ಸಿನಿಂದ ಭಾಗವಹಿಸಿದ್ದರು. ಇಸಾಕ್ ಎಂಬ ಚಾಲಕ ತನ್ನ ಸ್ವಂತ ಖರ್ಚಿನಲ್ಲಿ ಹುಲ್ಲು ಸವರುವ ಕಾಮಗಾರಿ ನಡೆಸಿಕೊಟ್ಟರು.