×
Ad

ಹದೆಗೆಟ್ಟ ಫರಂಗಿಪೇಟೆ-ಕುಂಪನಮಜಲು ರಸ್ತೆ : ಬಾಡಿಗೆ ತೆರಳಲು ರಿಕ್ಷಾ ಚಾಲಕರಿಂದ ನಿರಾಕರಣೆ

Update: 2016-07-27 18:38 IST

ಬಂಟ್ವಾಳ, ಜು. 27: ಇಲ್ಲಿನ ಫರಂಗಿಪೇಟೆ - ಕುಂಪನಮಜಲು ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಆಟೊ ರಿಕ್ಷಾ ಚಾಲಕರು ಬಾಡಿಗೆ ತೆರಳಲು ನಿಕಾರಿಸುತ್ತಿರುವ ಹಿನ್ನೆಲೆಯಲ್ಲಿ ಕುಂಪನಮಜಲು ನಿವಾಸಿಗಳು ಮಂಗಳವಾರ ರಾತ್ರಿ ಆಟೊ ನಿಲ್ದಾಣಕ್ಕೆ ಆಗಮಿಸಿ ಆಟೊ ಚಾಲಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದ ಬಗ್ಗೆ ವರದಿಯಾಗಿದೆ.

ನಾಲ್ಕೈದು ತಿಂಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯು ಸಂಪೂರ್ಣವಾಗಿ ಹದೆಗೆಟ್ಟಿದ್ದು ವಾಹನ ಹಾಗೂ ಜನ ಸಂಚಾರಕ್ಕೆ ಅಯೋಗ್ಯವೆನಿಸಿದೆ. ರಸ್ತೆ ಹದೆಗೆಟ್ಟಿರುವುದರಿಂದ ಫರಂಗಿಪೇಟೆಯಲ್ಲಿರುವ ರಿಕ್ಷಾ ಚಾಲಕರು ಕುಂಪನಮಜಲಿಗೆ ಬಾಡಿಗೆ ತೆರಳಲು ನಿರಾಕರಿಸುತ್ತಿದ್ದು ಕ್ಯೂ ಪ್ರಕಾರ ಬಾಡಿಗೆ ತೆರಳಬೇಕೆಂಬ ನಿಯಮವಿದ್ದರೂ ಮುಂದಿನ ರಿಕ್ಷಾದವರು ಹಿಂದಿನ ರಿಕ್ಷಾವನ್ನೂ ಹಿಂದಿನ ರಿಕ್ಷಾದವರು ಅದರ ಹಿಂದಿನ ರಿಕ್ಷಾವನ್ನು ತೋರಿಸಿ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಬಾಡಿಗೆ ಬರಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಕಂಗೆಟ್ಟ ಕುಂಪನಮಜಲು ನಿವಾಸಿಗಳು ಫರಂಗಿಪೇಟೆಯಲ್ಲಿರುವ ಆಟೊ ನಿಲ್ದಾಣಕ್ಕೆ ತೆರಳಿ ಆಟೊ ಚಾಲಕರೊಂದಿಗೆ ಮಾತಿಗಿಳಿದು ಈಗ ಬಾಡಿಗೆ ಬರಲು ನಿರಾಕರಿಸುವುದಾದರೆ ಮುಂದಿನ ದಿನಗಳಲ್ಲೂ ಬಾಡಿಗೆ ಬರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ನಾಗರಿಕರನ್ನು ಸಮಾಧಾನಗೊಳಿಸಿ ಸಾರ್ವಜನಿಕರು ಬಾಡಿಗೆ ಕರೆದ ತಕ್ಷಣ ತೆರಳುವಂತೆ ಆಟೊ ಚಾಲಕರಿಗೆ ಸೂಚಿಸಿದ್ದಾರಲ್ಲದೆ ಈ ಹಿಂದಿನಂತೆ ಕ್ಯೂ ನಿಯಮದ ಪ್ರಕಾರ ನಿಲ್ದಾಣದಲ್ಲಿ ಮುಂದೆ ಇದ್ದ ರಿಕ್ಷಾದವರೇ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕು ಎಂದು ಸೂಚಿಸುವ ಮೂಲಕ ಸಮಸ್ಯೆಗೆ ತೆರೆ ಎಳೆಯಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News