×
Ad

ತೆಂಕಮಿಜಾರು ಗ್ರಾಮಸಭೆ: ಮಳೆಗಾಲ ಮುಗಿಯುವ ಮೊದಲೇ ಮಣ್ಣಿನ ಒಡ್ಡುಗಳನ್ನು ನಿರ್ಮಿಸಿ - ಸದಾಶಿವ ಶೆಟ್ಟಿ ಸಲಹೆ

Update: 2016-07-27 19:59 IST

 ಮೂಡುಬಿದಿರೆ,ಜು.27 : ಕೃಷಿಗೆ ಹಾಗೂ ಗ್ರಾಮದ ಜನರಿಗೆ ಕುಡಿಯಲು ನೀರಿನ ಸಮಸ್ಯೆ ಬಾರದಂತೆ ಮಳೆಗಾಲ ಮುಗಿಯುವ ಮೊದಲೇ ಅಣೆಕಟ್ಟುಗಳಿಗೆ ಮಣ್ಣಿನ ಒಡ್ಡುಗಳನ್ನು ನಿರ್ಮಿಸಿ ನೀರು ನಿಲ್ಲುವಂತೆ ಮಾಡಬೇಕೆಂದು ಗ್ರಾಮಸ್ಥ ಸದಾಶಿವ ಶೆಟ್ಟಿ ಅವರು ಸಲಹೆ ನೀಡಿದ್ದಾರೆ.

 ಅವರು ಬುಧವಾರದಂದು ತೆಂಕಮಿಜಾರು ಗ್ರಾಮ ಪಂಚಾಯತ್‌ನ ಸಭಾಭವನದಲ್ಲಿ ನಡೆದ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡಿ ಕಳೆದ ವರ್ಷ ಮಳೆಗಾಲ ಮುಗಿದ ನಂತರ ಪಂಚಾಯತ್ ನೂತನ ಮಾದರಿಯಲ್ಲಿ ಅಣೆಕಟ್ಟುಗಳಿಗೆ ಮಣ್ಣಿನ ಒಡ್ಡುಗಳನ್ನು ನಿರ್ಮಿಸಿ ಹರಿದು ಹೋಗುತ್ತಿದ್ದ ನೀರನ್ನು ತಡೆ ಹಿಡಿದು ನಿಲ್ಲುವಂತೆ ಮಾಡಿ ಗ್ರಾಮಸ್ಥರಿಗೆ ನೀರಿನ ಸಮಸ್ಯೆಯನ್ನು ನೀಗಿಸಿದೆ. ಆದ್ದರಿಂದ ಈ ವರ್ಷ ಮಳೆಗಾಲ ಮುಗಿಯುವ ಮೊದಲೆ ಈ ಕೆಲಸವನ್ನು ಮಾಡಿ ಹೆಚ್ಚಿನ ನೀರನ್ನು ಸಂಗ್ರಹವಾಗುವಂತೆ ಮಾಡಬೇಕೆಂದು ಆಗ್ರಹಿಸಿದರು.

ಪರವಾನಿಗೆ ಪಡೆಯದೆ ಬಡವರು ಮನೆ ನಿರ್ಮಿಸಿದರೆ ಪಂಚಾಯತ್‌ನವರು ಹಲವು ಕಾನೂನುಗಳನ್ನು ಮಾತನಾಡುತ್ತಾರೆ ಆದರೆ ಪಂಚಾಯತ್‌ನಿಂದ ಪರವಾನಿಗೆ ಪಡೆಯದೇ ಪಂಚಾಯತ್ ಸದಸ್ಯರೇ ಕಾನೂನುಗಳನ್ನು ಗಾಳಿಗೆ ಅನಧಿಕೃತವಾಗಿ ಮನೆ ನಿರ್ಮಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿದಾಗ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ನಡೆದಿದೆ. ಪಂಚಾಯತ್‌ನ ಅಧಿಕಾರಿಗಳಿಗೆ ಹೀಗಾದರೆ ಇನ್ನೂ ಸಾಮಾನ್ಯ ಜನರ ಪಾಡೇನು, ಪಂಚಾಯತ್ ವತಿಯಿಂದ ನಿರ್ಮಾಣ ಹಂತದಲ್ಲಿರುವ ಎರಡು ಹಿಂದೂ ರುದ್ರಭೂಮಿಗಳ ಕಾಮಗಾರಿ ಯಾವಾಗ ಪೂರ್ಣಗೊಳ್ಳಬಹುದು ಎಂದು ಲಿಂಗಪ್ಪ ಗೌಡ ಪ್ರಶ್ನಿಸಿದಾಗ, ಉತ್ತರಿಸಿದ ಪಿಡಿಓ ಸಾಯೀಶ ಚೌಟ ತಾನು ಈ ಬಗ್ಗೆ ಪಂಚಾಯತ್ ಸದಸ್ಯರ ಗಮನಕ್ಕೆ ತಂದು ಕಾನೂನು ಕ್ರಮವನ್ನು ಕೈಗೊಂಡಿರುವುದಾಗಿ ತಿಳಿಸಿದರು. ಹಿಂದೂ ರುದ್ರಭೂಮಿಯ ಕಾಮಗಾರಿ ಪೂರ್ಣಗೊಳ್ಳಲು ಅನುದಾನ ಕೊರತೆ ಇದೆ ಸ್ವಲ್ಪ ತಮ್ಮ ಕಡೆಗಳಿಂದಲೂ ಸಹಕಾರ ಬರಲಿ ಅಥವಾ ತಮಗೆ ಗೊತ್ತಿರುವ ಸ್ಥಿತಿವಂತರಿಂದ ಡೊನೇಶನ್ ಮೂಲಕ ಸಂಗ್ರಹಿಸಿ ನೀಡುವಂತೆ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಸಲಹೆ ನೀಡಿದರು.

 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಕೇಂದ್ರಕ್ಕೆ ತಡವಾಗಿ ಬರುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ತನ್ನ ಮನೆಯ ಬಳಿ ಸ್ವಲ್ಪ ಕಸ ಇದ್ದುದಕ್ಕೆ ಪಿಡಿಓ ಅವರು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಂಗನವಾಡಿ ಕೇಂದ್ರದ ಸುತ್ತ ಕಸ ಕಡ್ಡಿಗಳು ತುಂಬಿರುವುದರ ಬಗ್ಗೆ ಗ್ರಾಮಸ್ಥ ಪ್ರಕಾಶ್ ಅವರು ಸಭೆಯ ಗಮನಕ್ಕೆ ತಂದರು.

   ಇಲ್ಲಿಗೆ 9.45ರ ವೇಳೆಗೆ ಬಸ್ಸು ಇರುವುದರಿಂದ ತಾವು ಅದರಲ್ಲಿಯೇ ಬರುತ್ತಿರುವುದು ಆದರೆ ತಮ್ಮ ಸಹಾಯಕಿ ಅವರು ಬೇಗನೇ ಬಂದು ಬಾಗಿಲು ತೆರೆಯುತ್ತಾರೆ ಆದರೆ ತಾವು ವೈಯಕ್ತಿತ ಧ್ವೇಷದಿಂದ ಸುಮ್ಮನೆ ಆರೋಪ ಮಾಡಬೇಡಿ ಎಂದು ಅಂಗನವಾಡಿ ಕಾರ್ಯಕರ್ತೆ ಹೇಳಿದರು. ಈ ಬಗ್ಗೆ ಪಂಚಾಯತ್ ವತಿಯಿಂದ ಅಂಗನವಾಡಿ ಮೇಲ್ವೀಚಾರಕರ ಗಮನಕ್ಕೆ ತರಲಾಗುವುದು ಎಂದು ಪಿಡಿಓ ತಿಳಿಸಿದರು.

 ನೀರಿನ ಬಿಲ್‌ಲ್ ಬಾಕಿ ಇರುವುದಕ್ಕೆ ಪಂಚಾಯತ್ ಕನೆಕ್ಷನ್ ತೆಗೆದಿರುವ ಬಗ್ಗೆ ಗ್ರಾಮಸ್ಥ ಜಯಶೆಟ್ಟಿ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ, ತಾವು ಸುಮಾರು 2000ದಷ್ಟು ನೀರಿನ ಬಿಲ್ಲನ್ನು ಪಾವತಿಸದೆ ಬಾಕಿ ಇರಿಸಿರುವಿರಿ. ಯಾರೂ ನೀರಿನ ಬಿಲ್ಲನ್ನು ಬಾಕಿ ಇಡಬೇಡಿ ತಾವು ವಿದ್ಯುತ್ ಬಿಲ್‌ಲ್, ಪಂಪು ಅಪರೇಟರ್‌ಗೆ ಸಂಬಳವನ್ನು ಅದರಿಂದಲೇ ನೀಡಬೇಕಾಗಿದೆ. ತಾವೆಲ್ಲರೂ ನೀರಿನ ಬಿಲ್ಲನ್ನು ಬಾಕಿ ಇಟ್ಟರೆ ಪಂಚಾಯತ್ ಎಲ್ಲಿಂದ ಭರಿಸುವುದು ಎಂದು ಪಿಡಿಓ ಪ್ರಶ್ನಿಸಿದರು.

ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಮಸ್ಯೆಗಳಿದ್ದರೆ ನೇರವಾಗಿ ಪಂಚಾಯತ್‌ಗೆ ಬಂದು ತಿಳಿಸಿ ಗ್ರಾಮಸ್ಥರು ಮತ್ತು ನಾವೆಲ್ಲರೂ ಒಟ್ಟಾಗಿ ಸೇರಿ ಸಮಸ್ಯೆಗಳನ್ನು ಬಗೆ ಹರಿಸೋಣ ಎಂದು ಗ್ರಾಮಸ್ಥರಲ್ಲಿ ವಿನಂತಿಸಿದರು.

ಶಿವಾನಂದ ಕಾಯ್ಕಿಣಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿ ಸಲಹೆ ನೀಡಿದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

 ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ, ತಾ.ಪಂ ಸದಸ್ಯ ಪ್ರಕಾಶ್ ಗೌಡ, ಪಂಚಾಯತ್ ಸದಸ್ಯರು, ಜಿ.ಪಂ ಇಂಜಿನಿಯರ್ ವಿಶ್ವನಾಥ ಶೆಟ್ಟಿ, ಮೆಸ್ಕಾಂ, ಆರೋಗ್ಯ, ಕಂದಾಯ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಸ್ವಾಗತಿಸಿದರು. ಸಿಬಂದಿ ಆನಂದ ಅವರು ವಾರ್ಷಿಕ ಜಮಾಖರ್ಚಿನ ವಿವರ ನೀಡಿದರು. ರಾಕೇಶ್ ವಾರ್ಡ್ ಸಭೆಯ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News