ಎಎನ್-32 ವಿಮಾನ ಕಾಣೆ ಕೆಲವು ವಸ್ತುಗಳು ಪತ್ತೆ: ಪಾರಿಕ್ಕರ್
ರಾಮೇಶ್ವರ, ಜು.27: ಕಾಣೆಯಾಗಿರುವ ಎಎನ್-32 ವಿಮಾನದ ಶೋಧ ಕಾರ್ಯಾಚರಣೆ 6ನೆ ದಿನವನ್ನು ಮುಗಿಸುತ್ತ ಬಂದಿದೆ. 29 ಮಂದಿ ರಕ್ಷಣಾ ಸಿಬ್ಬಂದಿಯನ್ನೊಳಗೊಂಡ ಹಡಗೊಂದನ್ನು ಶೋಧಕ್ಕಾಗಿ ಬಳಸಲಾಗಿದೆ. ಇದೇ ವೇಳೆ, ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ಬಂಗಾಳಕೊಲ್ಲಿಯಲ್ಲಿ ಕೆಲವು ವಸ್ತುಗಳು ಪತ್ತೆಯಾಗಿವೆ. ಅವು ನತದೃಷ್ಟ ವಿಮಾನಕ್ಕೆ ಸಂಬಂಧಿಸಿದವುಗಳೇ ಎಂಬುದನ್ನು ಪರಿಶೀಲಿಸುವಂತೆ ಶೋಧ ತಂಡಗಳಿಗೆ ಸೂಚಿಸಲಾಗಿದೆಯೆಂದು ತಿಳಿಸಿದ್ದಾರೆ.
ಯಾವುದೇ ಖಚಿತ ವರದಿಗಳು ಬಂದಿಲ್ಲ. ಆದರೆ, ಕೆಲವು ವಸ್ತುಗಳು ಕಾಣಿಸಿಕೊಂಡಿವೆ. ಅವುಗಳನ್ನು ಪರಿಶೀಲಿಸುವಂತೆ ಶೋಧ ಹಡಗಿಗೆ ಸೂಚಿಸಲಾಗಿದೆಯೆಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರ ಪ್ರತಿಮೆಯ ಅನಾವರಣಕ್ಕಾಗಿ ಇಲ್ಲಿಗಾಗಮಿಸಿರುವ ಪಾರಿಕ್ಕರ್ ಹೇಳಿದ್ದಾರೆ.
ವಸ್ತುಗಳು ವಿಮಾನಕ್ಕೆ ಸಂಬಂಧಿಸಿದವುಗಳೇ ಎಂಬುದನ್ನು ತಾವು ಖಚಿತಪಡಿಸಲಾರೆವು. ವಾಯುಪಡೆ, ನೌಕಾಪಡೆ ಹಾಗೂ ತಟ ರಕ್ಷಕ ಪಡೆಗಳು ಯಾವುದೇ ಸುಳಿವುಗಳನ್ನು ಬಿಡದೆ ಜಾಲಾಡುತ್ತಿವೆಯೆಂದು ಅವರು ತಿಳಿಸಿದ್ದಾರೆ.
ಜು.22ರಂದು ಪೋರ್ಟ್ ಬ್ಲೇರ್‌ಗೆ ಪ್ರಯಾಣಿಸುವ ವೇಳೆ ಕಾಣೆಯಾಗಿದ್ದ ವಿಮಾನದ ಶೋಧಕ್ಕಾಗಿ ತಟ ರಕ್ಷಕ ಪಡೆ ಹಾಗೂ ನೌಕಾಪಡೆಗಳ 17 ಹಡಗುಗಳು ಹಾಗೂ 23 ವಿಮಾನಗಳನ್ನು ಬಂಗಾಳಕೊಲ್ಲಿಯಲ್ಲಿ ನಿಯೋಜಿಸಲಾಗಿದೆ.