ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ಥಳಿತ ರಾಜ್ಯಸಭೆಯಲ್ಲಿ ವಿಪಕ್ಷದಿಂದ ಕೋಲಾಹಲ

Update: 2016-07-27 14:57 GMT

ಹೊಸದಿಲ್ಲಿ, ಜು.27: ತಥಾತಥಿತ ಗೋರಕ್ಷಕರಿಂದ ದಲಿತರು ಹಾಗೂ ಮುಸ್ಲಿಮರ ವಿರುದ್ಧ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ‘ವೌನ’ವನ್ನು ರಾಜ್ಯಸಭೆಯ ಹಲವು ಮಂದಿ ಆಕ್ರೋಶಿತ ವಿಪಕ್ಷ ಸದಸ್ಯರು ಬುಧವಾರ ಬೆಳಗ್ಗೆ ಸದನದ ಅಂಗಳಕ್ಕಿಳಿದು ಪ್ರತಿಭಟಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಮಾರಾಟಕ್ಕಾಗಿ ಗೋಮಾಂಸ ಒಯ್ಯುತ್ತಿದ್ದ ಮುಸ್ಲಿಂ ಮಹಿಳೆಯರಿಬ್ಬರನ್ನು ಥಳಿಸಲಾಗಿದೆಯೆಂಬ ಬುಧವಾರ ಮುಂಜಾನೆಯ ವರದಿಗಳ ಕುರಿತಾಗಿಯೂ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಉನಾದಲ್ಲಿ ಸತ್ತ ಗೋವಿನ ಚರ್ಮ ಸುಲಿಯುತ್ತಿದ್ದ ಕೆಲವು ದಲಿತ ಯುವಕರಿಗೆ ಗೋ ರಕ್ಷಕರು ಥಳಿಸಿದ ಎರಡು ವಾರಗಳ ಬಳಿಕ ಈ ಘಟನೆ ನಡೆದಿದೆ.
ಬುಧವಾರ ರಾಜ್ಯಸಭೆಯಲ್ಲಿ ಗೋರಕ್ಷಕರಿಂದ ದಲಿತರು ಮತ್ತು ಮುಸ್ಲಿಮರ ವಿರುದ್ಧ ಹಿಂಸಾಚಾರದ ವಿಷಯ ಪ್ರಸ್ತಾವಿಸಿದ ಬಿಎಸ್ಪಿ ವರಿಷ್ಠೆ ಮಾಯಾವತಿ, ಕೇಂದ್ರ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ಅವರನ್ನು ಬೆಂಬಲಿಸಿದ ಕಾಂಗ್ರೆಸ್ ಸದಸ್ಯರೂ ಇದೇ ವಿಷಯದ ಬಗ್ಗೆ ಪ್ರತಿಭಟನೆ ನಡೆಸಿದರು.
ಬಿಜೆಪಿಯು, ‘ಮಹಿಲಾವೋಂಕೇ ಸಮ್ಮಾನ್ ಮೇ, ಬಿಜೆಪಿ ಮೈದಾನ್ ಮೇ’ ಎಂಬ ಘೋಷಣೆ ಕೂಗುತ್ತಿದೆ. ಆದರೂ, ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಗೋಮಾಂಸದ ವದಂತಿಯಿಂದಾಗಿ ಮಹಿಳೆಯರನ್ನು ಥಳಿಸಲಾಗಿದೆ. ಬಿಜೆಪಿ ತನ್ನದೇ ಘೋಷಣೆಯನ್ನು ಪಾಲಿಸುತ್ತಿಲ್ಲವೆಂದು ಮಾಯಾವತಿ ವಾಗ್ದಾಳಿ ನಡೆಸಿದರು.
ಬಳಿಕ ಈ ವಿಷಯವನ್ನು ಎತ್ತಿಕೊಂಡ ಕಾಂಗ್ರೆಸ್ ಸಂಸದರು, ದಲಿತರು ಹಾಗೂ ಮುಸ್ಲಿಮರು ಹಿಂಸಾಚಾರಕ್ಕೆ ಹೆಚ್ಚು ಹೆಚ್ಚು ಗುರಿಯಾಗುತ್ತಿದ್ದಾರೆಂದು ಆರೋಪಿಸಿದರು.
ಗೋವುಗಳನ್ನು ರಕ್ಷಿಸಬೇಕೆಂಬುದನ್ನು ತಾವು ಒಪ್ಪುತ್ತೇವೆ. ಆದರೆ, ದಲಿತರು ಹಾಗೂ ಮುಸ್ಲಿಮರ ಮೇಲೆ ಹಲ್ಲೆಗೆ ಗೋರಕ್ಷಣೆಯನ್ನು ನೆಪವಾಗಿ ಬಳಸುವುದನ್ನು ತಾವೊಪ್ಪುವುದಿಲ್ಲವೆಂದು ಕಾಂಗ್ರೆಸ್ ಸಂಸದ ಗುಲಾಂ ನಬಿ ಆಝಾದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News