×
Ad

ಕತರ್ ನಲ್ಲಿ ಕಾರು ಅಪಘಾತ : ಕೋಮಾದಲ್ಲಿರುವ ಬಂಟ್ವಾಳದ ಯುವಕ 13 ವರ್ಷಗಳ ಬಳಿಕ ತವರಿಗೆ

Update: 2016-07-27 20:30 IST

ಬಂಟ್ವಾಳ, ಜು.27: ಕತರ್ ದೇಶದ ದೋಹಾದಲ್ಲಿ 13 ವರ್ಷಗಳ ಹಿಂದೆ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿರುವ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನಾಡಾಜೆ ನಿವಾಸಿ ಮುಹಮ್ಮದ್ ರಫೀಕ್ ಎಂಬವರನ್ನು ಇತ್ತೀಚೆಗೆ ತವರಿಗೆ ಕರೆದುಕೊಂಡು ಬರಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

44 ವರ್ಷ ಪ್ರಾಯದ ಮುಹಮ್ಮದ್ ರಫೀಕ್ ನಾಡಾಜೆ ನಿವಾಸಿ ಪಿ.ಇಬ್ರಾಹೀಂ ಬ್ಯಾರಿ ಎಂಬವರ ಪುತ್ರ. ಇಬ್ರಾಹೀಂ ಬ್ಯಾರಿಯವರ ನಾಲ್ವರು ಪುತ್ರರು, ಓರ್ವ ಪುತ್ರಿಯ ಪೈಕಿ ಮೂರನೆಯವ. 2004ರಲ್ಲಿ ರಫೀಕ್ ಚಲಾಯಿಸುತ್ತಿದ್ದ ಕಾರಿಗೆ ಕತ್ತಾರ್ ಪ್ರಜೆಯೊಬ್ಬಳು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ಅಪಘಾತದ ಪರಿಣಾಮ ಗಂಭೀರ ಗಾಯಗೊಂಡ ಅವರು 28 ದಿವಸಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿದ್ದರು. ಬಳಿಕ ಪ್ರಾಣಾಪಾಯದಿಂದ ಪಾರಾದರಾದರೂ ಶಾಶ್ವತ ಕೋಮಾ ಸ್ಥಿತಿಗೆ ಜಾರಿದ್ದರು.

13 ವರ್ಷಗಳಿಂದ ಕತರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ತವರಿಗೆ ಕರೆದುಕೊಂಡು ಬರಲಾಗಿದೆ. ವಿಮಾನದ ಮೂಲಕ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಕರೆತಂದು ಬಳಿಕ ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಕರೆತಂದು ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆರು ದಿವಸಗಳ ಬಳಿಕ ಇಲ್ಲಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿ ತುರ್ತು ನಿಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಫೀಕ್ ವಿವಾಹಿತರಾಗಿದ್ದು 14 ವರ್ಷದ ಪುತ್ರಿಯಿದ್ದಾಳೆ. ತನ್ನ ಪುತ್ರಿ ಒಂದೂವರೆ ವರ್ಷದ ಮಗುವಾಗಿದ್ದಾಗ ಕೆಲಸ ಹುಡುಕಿಕೊಂಡು ಕತರ್ ಗೆ ತೆರಳಿದ್ದ ಅವರು ಹೌಸ್ ಡ್ರೈವರ್ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿ ಒಂದೂವರೆ ವರ್ಷ ಳೆದಾಗ ಅಪಘಾತಕ್ಕೊಳಗಾಗಿದ್ದರು.

‘ತಲೆಭಾಗಕ್ಕೆ ಗಂಭೀರ ಗಾಯಗೊಂಡ ಅವರಿಗೆ ಕತರ್ ನಲ್ಲಿ ಚಿಕಿತ್ಸೆ ನೀಡಿದ್ದ ಪ್ರತಿಯೊಬ್ಬ ವೈದ್ಯರೂ, ‘‘ಕೋಮಾ ಸ್ಥಿತಿಯಿಂದ ಅವರು ಚೇತರಿಸಿಕೊಳ್ಳಲಾರರು’’ ಎಂದು ಹೇಳಿದ್ದಾರೆ. ಆದರೂ ನಾವು ಅಲ್ಲಿನ ವೈದ್ಯಕೀಯ ವರದಿಯ ಪ್ರತಿಯನ್ನು ತರಿಸಿ ಬೆಂಗಳೂರಿನ ಪ್ರಸಿದ್ಧ ಖಾಸಗಿ ಆಸ್ಪತ್ರೆಯ ವೈದ್ಯರನ್ನೂ ಭೇಟಿ ಮಾಡಿದ್ದೇವೆ. ಅವರಿಂದಲೂ ಅದೇ ಉತ್ತರ ದೊರಕಿದೆ’ ಎನ್ನುತ್ತಾರೆ ರಫೀಕ್‌ರ ಸಹೋದರ ಹಮೀದ್.

‘ತುರ್ತು ನಿಗಾ ಘಟಕದಲ್ಲಿರುವ ಅವರಿಗೆ ದ್ರವ ಆಹಾರವನ್ನು ಪೈಪ್ ಮೂಲಕ ಪೂರೈಸಲಾಗುತ್ತದೆ. ರಫೀಕ್‌ರ ಚಿಕಿತ್ಸೆಯ ವೆಚ್ಚವನ್ನು ಅಲ್ಲಿನ ಸರಕಾರ ಸಂಪೂರ್ಣವಾಗಿ ಭರಿಸಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 6 ದಿನ ತುರ್ತು ನಿಗಾ ಘಟಕದಲ್ಲಿದ್ದ ವೆಚ್ಚ 50,000 ರೂ. ಆಗಿದೆ. ಇದಲ್ಲದೆ ಈಗಲೂ ದಿನಂಪ್ರತಿ ಸಾವಿರಾರು ರೂ.ಗಳ ಔಷಧಗಳನ್ನು ನೀಡಲಾಗುತ್ತಿದೆ. ಅವರನ್ನು ಭಾರತಕ್ಕೆ ಕರೆತರಲು ಕಾನೂನಿನಲ್ಲಿದ್ದ ತೊಡಕನ್ನು ನಿವಾರಿಸಿಕೊಡುವಲ್ಲಿ ಕೆಸಿಎಫ್ ಸಂಸ್ಥೆಯವರು ನಮಗೆ ನೆರವಾಗಿದ್ದಾರೆ’ ಎಂದು ಹಮೀದ್ ಹೇಳಿದ್ದಾರೆ.

ಮನೆಯಲ್ಲಿರುವ ರಫೀಕ್‌ನ ವೃದ್ಧ ತಂದೆ-ತಾಯಿ ತಮ್ಮ ಪುತ್ರ ಇಂದಲ್ಲ ನಾಳೆ ಚೇತರಿಕೊಳ್ಳುತ್ತಾನೆ ಎಂಬ ಭರವಸೆಯಲ್ಲಿದ್ದಾರೆ.

Writer - -ಇಮ್ತಿಯಾಝ್ ಶಾ ತುಂಬೆ

contributor

Editor - -ಇಮ್ತಿಯಾಝ್ ಶಾ ತುಂಬೆ

contributor

Similar News