ಬಿಳಿನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

Update: 2016-07-27 16:21 GMT

ಕಡಬ, ಜು.27: ಹಿರಿಯ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಯುವ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ಮುಂಚೂಣಿಗೆ ಬರಬೇಕು. ತಳಮಟ್ಟದಲ್ಲಿ ಸಂಘಟನೆ ಬಲಿಷ್ಠವಾದಾಗ ಮಾತ್ರ ನಾವು ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ ಗೆಲುವು ಸಾಧಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

 ಅವರು ಬುಧವಾರ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಕಡಬ ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಜರಗಿದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮಂಡಲ ಹಾಗೂ ಶಕ್ತಿಕೇಂದ್ರಗಳಿಗೆ ಹೊಸ ಪದಾಧಿಕಾರಿಗಳ ಆಯ್ಕೆಯಾಗಿದೆ. ಪದಾಧಿಕಾರಿಗಳಿಗೆ ಮಾತ್ರ ಪಕ್ಷದ ಸಂಘಟನೆಯ ಜವಾಬ್ದಾರಿ ಎಂದು ತಿಳಿದುಕೊಳ್ಳದೆ ಪ್ರತಿಯೋರ್ವ ಕಾರ್ಯಕರ್ತರೂ ಪಕ್ಷಕ್ಕಾಗಿ ಸಂಘಟನಾತ್ಮಕವಾಗಿ ದುಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.

  ಬಿಜೆಪಿ ಸುಳ್ಯ ಮಂಡಲದ ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಬಿಜೆಪಿಯು ಕಾರ್ಯಕರ್ತ ಕೇಂದ್ರಿತ ಪಕ್ಷವಾಗಿದ್ದು, ಕಾರ್ಯಕರ್ತರನ್ನು ತಳಮಟ್ಟದಿಂದ ಸಂಘಟಿಸಿದಾಗ ಮಾತ್ರ ಪಕ್ಷ ಬೆಳೆಯುತ್ತದೆ. ಪಕ್ಷಕ್ಕಾಗಿ ಹಗಳಿರುಲೆನ್ನದೆ ದುಡಿಯುವ ನಿಷ್ಠಾವಂತ ಕಾರ್ಯಕರ್ತರೇ ಬಿಜೆಪಿಯ ಜೀವಾಳ ಎಂದರು.

   ಕಾರ್ಯಕ್ರಮದಲ್ಲಿ ಶಕ್ತಿಕೇಂದ್ರದ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಶಕ್ತಿಕೇಂದ್ರದ ನಿರ್ಗಮನ ಅಧ್ಯಕ್ಷ ಸತೀಶ್ ನಾಯಕ್ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಅವರು ಮಾತನಾಡಿ ಎಲ್ಲರ ಸಹಕಾರ ಕೋರಿದರು.

  ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ತಾ.ಪಂ.ಸದಸ್ಯೆ ಪಿ.ವೈ. ಕುಸುಮಾ ಉಪಸ್ಥಿತರಿದ್ದರು. ಬುಧವಾರ ನಿಧನರಾದ ಬಿಜೆಪಿ ಮುಖಂಡ, ಜಿ.ಪಂ.ಮಾಜಿ ಸದಸ್ಯ ನರೇಂದ್ರ ಅಭಿಕಾರ್ ಅವರಿಗೆ ಮೌನಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಜಿ.ಪಂ.ಅಧ್ಯಕ್ಷರು ಹಾಗೂ ಶಕ್ತಿಕೇಂದ್ರದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ನೂತನ ಪದಾಧಿಕಾರಿಗಳ ಜವಾಬ್ದಾರಿಗಳನ್ನು ಘೋಷಿಸಲಾಯಿತು.

   ಬಿಜೆಪಿ ಕಡಬ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ. ಸ್ವಾಗತಿಸಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಪ್ರಸ್ತಾವನೆಗೈದರು. ಯುವ ಮೋರ್ಚಾದ ಅಧ್ಯಕ್ಷ ಸುರೇಶ್ ದೇಂತಾರು ಹಕ್ಕೊತ್ತಾಯ ವಾಚಿಸಿದರು. ತಾ.ಪಂ.ಮಾಜಿ ಸದಸ್ಯರಾದ ಸರೋಜಿನಿ ಜಯಪ್ರಕಾಶ್ ಹಾಗೂ ಉದಯಕುಮಾರ್ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಎರ್ಕ ಬಿಳಿನೆಲೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News