ಕೇರಳ: ವಿ.ಎಸ್. ಅಚ್ಯುತಾನಂದನ್‌ರಿಗೆ ಸ್ಥಾನಮಾನದ ವಿಷಯ ಅನಿಶ್ಚಿತತೆಯಲ್ಲಿ
ತಿರುವನಂತಪುರಂ,ಜುಲೈ 28: ವಿಎಸ್ ಅಚ್ಯುತಾನಂದನ್‌ರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸುವ ವಿಚಾರ ಬುಧವಾರ ಸೇರಿದ್ದ ಸಚಿವ ಸಂಪುಟದ ಸಭೆಯಲ್ಲಿ ಪರಿಗಣನೆಗೆ ಬರಲಿಲ್ಲ ಎಂದು ವರದಿಯಾಗಿದೆ.ಕಳೆದ ವಿಧಾನಸಭಾ ಸಮ್ಮೇಳನದಲ್ಲಿ ವಿಎಸ್‌ರಿಗೆ ಎರಡು ಹುದ್ದೆ ಕಾನೂನು ಕುಣಿಕೆಯಿಂದ ಪಾರುಗೊಳಿಸಲಿಕ್ಕಾಗಿ ಕಾನೂನು ತಿದ್ದುಪಡಿ ಮಾಡಲಾಗಿತ್ತು. ಆದ್ದರಿಂದ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಶೀಘ್ರವೇ ನೇಮಿಸಲಾಗುವುದು ಎಂಬ ಭಾವನೆ ಸಾರ್ವತ್ರಿಕವಾಗಿ ಹರಡಿತ್ತು ಎನ್ನಲಾಗಿದೆ.
ಆದರೆ ಕಾನೂನಿನಲ್ಲಿ ತಿದ್ದುಪಡಿ ಮಾಡಿದರೂ ಆಯೋಗದ ವ್ಯವಸ್ಥೆಗೆ ಸಂಬಂಧಿಸಿ ಅಂತಿಮರೂಪ ಆಗದಿರುವ ನಿಟ್ಟಿನಲ್ಲಿ ಸಚಿವಸಂಪುಟದ ಸಭೆ ವಿಷಯವನ್ನು ಪರಿಗಣಿಸಿಲ್ಲ ಎನ್ನಲಾಗಿದೆ. ಎಲ್‌ಡಿಎಫ್ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಈ ವಿಷಯವನ್ನು ಸಚಿವಸಂಪುಟ ಪರಿಗಣಿಸಲಿದ್ದು, ಆಡಳಿತಸುಧಾರಣಾ ಆಯೋಗಕ್ಕೆ ಅಧ್ಯಕ್ಷರಲ್ಲದೆ 2-3 ಸದಸ್ಯರು ಇದ್ದಾರೆ ಎನ್ನಲಾಗಿದ್ದು ಇವರ ಹೆಸರು ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದೆ ಎಂದು ವರದಿ ತಿಳಿಸಿದೆ.