×
Ad

‘ಮಾನನಷ್ಟ ಕಾನೂನನ್ನು ರಾಜಕೀಯ ಅಸ್ತ್ರವಾಗಿ ಬಳಸಬಾರದು’

Update: 2016-07-28 13:13 IST

ಹೊಸದಿಲ್ಲಿ, ಜು.28: ಟೀಕೆ ಮಾಡುವ ವಿಪಕ್ಷಗಳ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ಹೂಡಬಾರದು. ಮಾನನಷ್ಟ ಕಾನೂನನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಬಾರದು ಎಂದು ಜಯಲಲಿತಾ ನೇತೃತ್ವದ ತಮಿಳುನಾಡು ಸರಕಾರಕ್ಕೆ ಸುಪ್ರೀಂಕೋರ್ಟ್ ಗುರುವಾರ ತಾಕೀತು ಮಾಡಿದೆ.

ವಿರೋಧ ಪಕ್ಷಗಳಾಗಲಿ, ಬೇರೇ ಯಾವ ವ್ಯಕ್ತಿಯೇ ಆಗಲಿ ಸರಕಾರದ ವಿರುದ್ಧ ‘ಭ್ರಷ್ಟಾಚಾರ’ ಇಲ್ಲವೇ ‘ಅಸಮರ್ಥ’ ಎಂದು ಟೀಕಿಸಿದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಾರದು ಎಂದು ಉಚ್ಛ ನ್ಯಾಯಾಲಯ ಆದೇಶಿಸಿದೆ.

ಆತ ಇಲ್ಲವೇ ಆಕೆಯ ವಿರುದ್ಧ ಯಾವುದೇ ಕಾನೂನು ಸಮರ್ಥನೆ ಇಲ್ಲದೆಯೇ ತಪ್ಪು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ ಘನತೆಗೆ ಧಕ್ಕೆ ತಂದರೆ ಮಾತ್ರ ಮಾನನಷ್ಟ ಕಾನೂನಿನ ಮೊರೆ ಹೋಗಬಹುದು.

ಡಿಎಂಡಿಕೆ ಮುಖ್ಯಸ್ಥ ಕ್ಯಾಪ್ಟನ್ ವಿಜಯಕಾಂತ್ ಹಾಗೂ ಅವರ ಪತ್ನಿಯ ವಿರುದ್ಧ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿ ತಿರುಪುರ ನ್ಯಾಯಾಲಯ ನೀಡಿರುವ ಜಾಮೀನುರಹಿತ ವಾರಂಟ್‌ನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಜಯಲಲಿತಾ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವಿಜಯಕಾಂತ್ ಹಾಗೂ ಅವರ ಪತ್ನಿ ವಿರುದ್ಧದ ಜಾಮೀನು ರಹಿತ ವಾರಂಟ್‌ಗೆ ಸುಪ್ರೀಂಕೋರ್ಟ್ ತಡೆ ಹೇರಿದೆ.

ಕಳೆದ ಕೆಲವು ವರ್ಷಗಳಲ್ಲಿ ತಮಿಳುನಾಡು ಸರಕಾರ ತನ್ನನ್ನು ಟೀಕಿಸುವ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತಾ ಬಾಯಿ ಮುಚ್ಚಿಸಲು ಯತ್ನಿಸುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News