ಆನ್ ಲೈನ್ ವಂಚಕರ ಬಗ್ಗೆ ಜಾಗರೂಕರಾಗಿರಿ
ಹೈದರಾಬಾದ್, ಜು.28: ನಗರದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನನ್ನು ಮರುಳುಗೊಳಿಸಿ ಆತ ನಕಲಿ ಆನ್ ಲೈನ್ ಕ್ರಿಪ್ಟೋ ಕರೆನ್ಸಿ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಯೋಜನೆಯಲ್ಲಿ ಹಣ ತೊಡಗಿಸುವಂತೆ ಮಾಡಿ ಆತನಿಗೆ ರೂ 18 ಲಕ್ಷ ವಂಚಿಸಿದ ಬೆಂಗಳೂರಿನ ವ್ಯಕ್ತಿಯೊಬ್ಬನನ್ನು ಸೈಬರಾಬಾದ್ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಂಚಕ ಕಂಪೆನಿಯ ವೆಬ್ ಸೈಟ್ ನಿರ್ವಹಿಸುತ್ತಿದ್ದ ಬಿ.ಎಂ ಜಗದೀಶ ಎಂದು ಗುರುತಿಸಲಾಗಿದೆ.
ತನಗೆ `3ಜಿಕಾಯಿನ್ ಕ್ರಿಪ್ಟೋಕರೆನ್ಸಿ' ಕಂಪೆನಿ ವಂಚಿಸಿದೆಯೆಂದು ಜುಲೈ 11 ರಂದು ಟೆಕ್ಕಿ ದೂರು ನೀಡಿದ್ದರು. 3ಜಿ ಕಾಯಿನ್ (ವರ್ಚುವಲ್ ಕರೆನ್ಸಿ) ಕಂಪೆನಿಯ ವೆಬ್ ಸೈಟ್ ಮುಖಾಂತರ 30 ಯುರೋ ಹೂಡಿಕೆ ಮಾಡಿ ಖರೀದಿಸಿದರೆ ಅದರ 180 ಪಟ್ಟು ಹೆಚ್ಚು ಹಣ ಎರಡು ವರ್ಷಗಳಲ್ಲಿ ಪಡೆಯಬಹುದೆಂದು ಹಾಗೂ ಸದಸ್ಯ ಹೊಸ ಹೂಡಿಕೆದಾರನನ್ನು ಪರಿಚಯಿಸಿದಲ್ಲಿ ಆತ ಹೂಡಿದ ಹಣದ ಶೇ.20 ಹಣ ಕಮಿಷನ್ ರೂಪದಲ್ಲಿ ದೊರೆಯುವುದೆಂದು ಕಂಪೆನಿಯ ಏಜಂಟರು ಹೇಳಿದ್ದರೆಂದು ದೂರುದಾರ ವಿವರಿಸಿದ್ದಾರೆ. ಆದರೆ ವಿವರಿಸಿದಂತೆ ಯಾವುದೇ ಹಣ ಬಾರದೇ ಇದ್ದಾಗ ತನ್ನನ್ನು ವಂಚಿಸಲಾಗಿದೆಯೆಂದು ತಿಳಿದ ಟೆಕ್ಕಿ ದೂರು ನೀಡಿದ್ದರು.
ಬಂಧಿತ ಜಗದೀಶನನ್ನು ಟ್ರಾನ್ಸಿಟ್ ವಾರಂಟ್ ಮುಖಾಂತರ ಪೊಲೀಸರು ಬೆಂಗಳೂರಿನಿಂದ ಹೈದರಾಬಾದ್ ಗೆ ಕರೆದುಕೊಂಡು ಬಂದಿದ್ದಾರೆ ಹಾಗೂ ಆತನ ವಿಚಾರಣೆ ನಡೆಸುತ್ತಿದ್ದಾರೆ.
``ಜಗದೀಶನ ಅಡಿಯಲ್ಲಿ 500 ಮಂದಿ ಏಜೆಂಟರು ಕೆಲಸ ಮಾಡುತ್ತಿದ್ದು ತಾನು ಸದಸ್ಯರಿಂದ ಸಂಗ್ರಹಿಸಿದ್ದ ಸುಮಾರು ರೂ. 2.89 ಕೋಟಿ ಹಣದಲ್ಲಿ ಹೆಚ್ಚಿನ ಹಣವನ್ನು ಏಜೆಂಟರಿಗೆ ಕಮಿಷನ್ ರೂಪದಲ್ಲಿ ನೀಡಿದ್ದಾನೆ,'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.