ತಂದೆಗೆ ಶಿಕ್ಷಕಿಯರ ಕಿರುಕುಳ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಹೊಸದಿಲ್ಲಿ, ಜು.28: ಫೀಸ್ ಕಟ್ಟಲಿಲ್ಲ ಎಂಬ ಕಾರಣಕ್ಕೆ ಶಾಲಾ ಟೀಚರ್‌ಗಳು 13ರ ಹರೆಯದ ಬಾಲಕಿಯ ತಂದೆಗೆ ಕಿರುಕುಳ ನೀಡಿದ ಕಾರಣ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಿಲ್ಲಿ ಗಾಝಿಯಾಬಾದ್ ಸಿಹಾನಿ ಗೇಟ್ ಪ್ರದೇಶದಲ್ಲಿ ಬುಧವಾರ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು 9ನೆ ತರಗತಿಯ ಪ್ರಿಯಾಂಶಿ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಟೀಚರ್‌ಗಳನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಮೃತ ಬಾಲಕಿಯ ಕುಟುಂಬಸ್ಥರು ಹೇಳುವ ಪ್ರಕಾರ, ಟೀಚರ್‌ಗಳು ಬೆಳಗ್ಗೆ ಬಾಲಕಿಯ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಯಾರೂ ಇರಲಿಲ್ಲ. ಮಧ್ಯಾಹ್ನ ಮತ್ತೊಮ್ಮೆ ಬಾಲಕಿಯ ಮನೆಗೆ ಹೋಗಿದ್ದ ಪ್ರಿನ್ಸಿಪಾಲ್ ಹಾಗೂ ಮೂವರು ಟೀಚರ್‌ಗಳು ಶಾಲೆಯ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಬಾಲಕಿಯ ತಂದೆಯೊಂದಿಗೆ ಜಗಳವಾಡಿದ್ದಾರೆ.
"ಟೀಚರ್ ನನಗೆ ಚಪ್ಪಲಿಯಿಂದ ಹೊಡೆದರು. ಮತ್ತೊಬ್ಬ ಟೀಚರ್ ಉದ್ದೇಶಪೂರ್ವಕವಾಗಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ತನ್ನ ಮೇಲೆ ಅನುಚಿತ ವರ್ತನೆಯ ಆರೋಪ ಹೊರಿಸಿದರು. ಪೊಲೀಸರು ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಕ್ಕೆ ನೊಂದಿರುವ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ"ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಸಂಬಂಧ ತನಿಖೆ ಮುಂದುವರಿದಿದೆ.