ಪುದು ಪ್ರಾಥಮಿಕ ಶಾಲೆಗೆ ಬೀಗ ಜಡಿದು ಧರಣಿ
ಫರಂಗಿಪೇಟೆ, ಜು.28: ತಾಲೂಕಿನ ಪುದು ಗ್ರಾಮದ ಸುಜೀರ್ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ವರ್ಗಾಯಿಸುವುದನ್ನು ವಿರೋಧಿಸಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಸೇರಿ ಶಾಲೆಗೆ ಬೀಗ ಜಡಿದು ಧರಣಿ ನಡೆಸಿದರು.
ಈ ಶಾಲೆಯಲ್ಲಿ ಸುಮಾರು 366 ವಿದ್ಯಾರ್ಥಿಗಳಿದ್ದು ದೈಹಿಕ ತರಬೇತು ಶಿಕ್ಷಕರು ಮತ್ತು ಪ್ರಾಶುಪಾಲರು ಸೇರಿದಂತೆ ಒಟ್ಟು 15 ಶಿಕ್ಷಕರಿದ್ದಾರೆ. ಸರಕಾರದ ಆದೇಶದಂತೆ ಇಲ್ಲಿಯ 5 ಶಿಕ್ಷಕರನ್ನು ವರ್ಗಾಯಿಸಲು ಕೌನ್ಸಿಲಿಂಗ್ ನಡೆದಿದ್ದು, ಇದನ್ನು ಖಂಡಿಸಿ ಶಾಲೆಗೆ ಬೀಗ ಜಡಿದು ಧರಣಿ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಹುಸೈನ್, ಹಲವು ಕಡೆ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಸುಜೀರ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಇಲ್ಲಿನ ಶಿಕ್ಷರನ್ನು ವರ್ಗಾವಣೆಗೊಳಿಸುವುದರಿಂದ ಇಲ್ಲಿಯ ಜನರಿಗೆ ತುಂಬಾ ಅನ್ಯಾಯ ಮಾಡಿದಂತಾಗುತ್ತದೆ. ವರ್ಗಾವಣೆ ಮಾಡುವ ಆದೇಶ ಬಂದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಶಾಲೆಯನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಂಚಾಯತ್ ಸದಸ್ಯ ಮುಹಮ್ಮದ್, ಸದಸ್ಯೆ ಮಾಲತಿ ಈ ಸಂದರ್ಭದಲ್ಲಿ ಮಾತನಾಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಶಿಕ್ಷಣಾಧಿಕಾರಿಗಳು, ಸರಕಾರಿ ಶಾಲೆ ಮತ್ತು ಶಿಕ್ಷಕರನ್ನು ಉಳಿಸುವ ಪ್ರಯತ್ನ ಮಾಡುತ್ತೇವೆ. ಈಗಾಗಲೇ ಅದೇಶ ಬಂದಿಲ್ಲ. ನಿಮ್ಮ ಮನವಿಯ ವರದಿ ಕಳುಹಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಧರಣಿಯನ್ನು ಕೈಬಿಡಲಾಯಿತು.
ಮಾಜಿ ಸದಸ್ಯ ಫಾರೂಕ್, ಉಪಾಧ್ಯಕ್ಷ ಹಾಶಿರ್, ಪಂಚಾಯತ್ ಸದಸ್ಯರಾದ ಜಹೀರ್, ಗಣೇಶ್, ಮನೋಜ್, ಜಾನಕಿ, ಎಸ್ಡಿಪಿಐ ಮುಖಂಡರಾದ ಜಮಾಲುದ್ದೀನ್, ಲತೀಫ್ ಮಾರಿಪಳ್ಳ, ಖಾದರ್ ಅಮೆಮಾರ್, ಬಶೀರ್ ಮಾರಿಪಳ್ಳ, ನಿಸಾರ್ ಕಾನ ಮತ್ತಿತರರು ಉಪಸ್ಥಿತರಿದ್ದರು. ಬಂಟ್ವಾಳ ಠಾಣೆಯ ಉಪನಿರೀಕ್ಷಕ ರಕ್ಷಿತ್ ಮತ್ತು ಸಿಬ್ವಂದಿ ಭದ್ರತೆ ಒದಗಿಸಿದರು.