×
Ad

ಮಹದಾಯಿ ಯೋಜನೆ ವಾದ ಮಂಡಿಸಲು ಸರಕಾರ ವಿಫಲ : ಆಪ್ ಆರೋಪ

Update: 2016-07-28 17:25 IST

ಸುಳ್ಯ, ಜು.28: ಮಹದಾಯಿ ಯೋಜನೆಯ ನ್ಯಾಯಾಧೀಕರಣದ ಎದುರು ಸಮರ್ಥವಾಗಿ ವಾದ ಮಂಡಿಸಲು ವಿಫಲವಾಗಿರುವ ನೀರಾವರಿ ಸಚಿವ ಎಂ.ಬಿ.ಪಾಟೀಲರು, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಅಶೋಕ್ ಎಡಮಲೆ, ಮಹದಾಯಿ ನೀರನ್ನು ಉತ್ತರ ಕರ್ನಾಟಕದ ಜನರಿಗೆ ಕುಡಿಯಲು ಹಾಗೂ ಕೃಷಿಗೆ ದೊರಕಿಸಿಕೊಡಲು ನಡೆಸಿದ ಹೋರಾಟಕ್ಕೆ ರಾಜಕಾರಣಿಗಳ ಲಜ್ಜೆಗೇಡಿತನ, ಮುಖ್ಯಮಂತ್ರಿಗಳ ಬೇಜವಾಬ್ದಾರಿ, ಪ್ರಧಾನ ಮಂತ್ರಿ ನಿರ್ಲಕ್ಷತನ ಹಾಗೂ ಕರ್ನಾಟಕ ವಿರೋಧಿ ನಿಲುವಿನಿಂದಾಗಿ ಸೋಲಾಗಿದೆ. ಇದು ರಾಜ್ಯದ 224 ಶಾಸಕರು, 28 ಸಂಸದರು ಜನತೆಗೆ ಮಾಡಿದ ವಂಚನೆ ಎಂದು ಆರೋಪಿಸಿದರು.

ಕಳೆದ ಸೆಪ್ಟಂಬರ್‌ನಲ್ಲಿ ಆಮ್‌ಆದ್ಮಿ ಪಾರ್ಟಿಯ ನಿಯೋಗ ಮಹದಾಯಿ ಮತ್ತು ಮಲಪ್ರಭಾ ನದಿ ಪ್ರದೇಶವನ್ನು ವೀಕ್ಷಿಸಿ, ಯೋಜನೆಯ ಕುರಿತು ಅಲ್ಲಿನ ಸ್ಥಳೀಯರಿಂದ ಹೋರಾಟಗಾರ ಮುಖಂಡರಿಂದ ವಿಸ್ತೃತ ಮಾಹಿತಿ ಪಡೆದು ಅಂಕಿ-ಅಂಶಗಳ ಸಹಿತ ಹೈಪವರ್ ಕಮಿಷನ್‌ನ್ನು ರಚಿಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆಗಳನ್ನು ನೀಡಿತ್ತು. 2002ರಿಂದ ಉತ್ತರ ಕರ್ನಾಟಕದ ಜನತೆ ಸತತ ಹೋರಾಟಗಳನ್ನು ನಡೆಸುತ್ತಿದ್ದರೂ, ಪರಿಸ್ಥಿತಿ ಗಂಭೀರತೆಯನ್ನು ಅರಿಯಲು ಸರಕಾರ ವಿಫಲವಾಗಿದೆ. ಎಎಪಿ ರೈತರ ಪರವಾಗಿ ನಿಲ್ಲಲು ಎಂದೂ ಹಿಂಜರಿಯುವುದಿಲ್ಲ ಎಂದವರು ಹೇಳಿದರು.

ಪಕ್ಷದ ಮುಖಂಡ ರಶೀದ್ ಜಟ್ಟಿಪಳ್ಳ, ಸದಸ್ಯರಾದ ದೀಕ್ಷಿತ್ ಜಯನಗರ, ಜಯರಾಮ ಐವರ್ನಾಡು, ಅನಿಲ್ ಬಳ್ಳಡ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News