ಮೂರೇ ತಿಂಗಳಲ್ಲಿ ವಾರ್ಷಿಕ ಗುರಿ ದಾಟಿದ ಪುತ್ತೂರು ಎಪಿಎಂಸಿ
ಪುತ್ತೂರು, ಜು.28: ಪುತ್ತೂರು ಎಪಿಎಂಸಿ ವರ್ಷದ ಗುರಿಯನ್ನು ಕೇವಲ ಮೂರು ತಿಂಗಳಲ್ಲಿ ಸಾಧಿಸಿದೆ. ಏಪ್ರಿಲ್ ಅಂತ್ಯಕ್ಕೆ ಮಾರುಕಟ್ಟೆ ಶುಲ್ಕದಲ್ಲಿ 2.25 ಕೋಟಿ ರೂ. ಗುರಿ ನಿಗದಿ ಪಡಿಸಲಾಗಿತ್ತು. ಆದರೆ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ 5.25 ಕೋಟಿ ರೂ. ವಸೂಲಾತಿಯಾಗಿದೆ.
ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಕಡಬ ಕೃಷ್ಣ ಶೆಟ್ಟಿ ಮಾಹಿತಿ ನೀಡಿದರು.
ಪುತ್ತೂರು ಎಪಿಎಂಸಿ ವರ್ಷದ ಗುರಿಯನ್ನು ಈಗಾಗಲೇ ದಾಟಿ ಆಗಿದೆ. ಇದೇ ರೀತಿ ಮುಂದುವರಿದರೆ ಉತ್ತಮ ಹಣ ಸಂಗ್ರಹವಾಗಲಿದೆ. ಇದು ಮಾರುಕಟ್ಟೆ ಶುಲ್ಕ ಮಾತ್ರ. ಉಳಿದ ಮೊತ್ತವನ್ನು ಇದರಲ್ಲಿ ಸೇರಿಸಿಲ್ಲ. ಪುತ್ತೂರು ಎಪಿಎಂಸಿ ಉತ್ತಮ ಸಾಧನೆ ಮಾಡುತ್ತಿದ್ದು, ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 60 ಸಿ ಯೋಜನೆಯಡಿ ಅನುದಾನ ಪ್ರಸ್ತಾವನೆ ಹಂತದಲ್ಲೇ ಬಾಕಿಯಾಗಿದೆ. ಕೇಂದ್ರ ಕಚೇರಿಯಲ್ಲಿ ಅನುಮೋದನೆಗೆ ಬಾಕಿ ಉಳಿದುಕೊಂಡಿದೆ. 2015-16ನೆ ಸಾಲಿನ ಅನುದಾನದಲ್ಲಿ 15 ರಸ್ತೆಗಳ ಕಾಮಗಾರಿ ಗುರುವಾರದಿಂದಲೇ ನಡೆಯಲಿದೆ. 2016-17ನೆ ಸಾಲಿನ ರಸ್ತೆ ಕಾಮಗಾರಿ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಪ್ರತಿಕ್ರಿಯಿಸಿದ ಸದಸ್ಯರು, ಬಾಕಿ ಉಳಿದ ಗ್ರಾಮೀಣ ರಸ್ತೆಗಳ ಕಾಮಗಾರಿಯೂ ಕೂಡಲೇ ಆಗಬೇಕು. ಬಾಕಿಯಾಗಿರುವ ಕಡತವನ್ನು ಶಾಸಕರ ಮೂಲಕ ಮಾತನಾಡಿಸಿ, ಮುಂದುವರಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಕೇಂದ್ರ ಕಚೇರಿ ಅನುಮತಿ ನೀಡಿದರೆ ಮುಂದಿನ ಕಾಮಗಾರಿ ನಡೆಸಲಾಗುವುದು. 2015-16ನೆ ಸಾಲಿನ ಅನುದಾನದಲ್ಲಿ 30 ಲಕ್ಷ ರೂ. ಬಿಡುಗಡೆಯಾಗಿದೆ. ಇದರಲ್ಲಿ 15 ಗ್ರಾಮೀಣ ರಸ್ತೆಗಳಿಗೆ ತೇಪೆ ಕಾರ್ಯ ಮಾತ್ರ ನಡೆಯಲಿದೆ. 2016-17ನೆ ಸಾಲಿನ ಅನುದಾನವನ್ನು ಬಿಡುಗಡೆ ಮಾಡಲು ಒತ್ತಾಯ ಮಾಡಲಾಗುವುದು ಎಂದರು.
ಪುತ್ತೂರು ಎಪಿಎಂಸಿ ಹಿಂಭಾಗದ ಕಂಪೌಂಡ್ ಜರಿದು ಬಿದ್ದಿದೆ. ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ತಂತಿ ಬೇಲಿ ಅಳವಡಿಸಲಾಗುವುದು. ಮುಂದೆ ಕ್ರಿಯಾಯೋಜನೆ ತಯಾರಿಸಿ ಬಳಿಕ ಪೂರ್ಣ ಪ್ರಮಾಣದ ಕಾಮಗಾರಿ ನಡೆಸಲಾಗುವುದು ಎಂದು ಕೃಷ್ಣ ಶೆಟ್ಟಿ ಕಡಬ ಸಭೆಗೆ ತಿಳಿಸಿದರು.
ಎಪಿಎಂಸಿ ಯಾರ್ಡ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.
ರೈತ ಸಭಾವನ ಉದ್ಘಾಟನೆ ಬಗ್ಗೆ ಪ್ರಸ್ತಾಪಿಸಲಾಯಿತು. ಪ್ರತಿಕ್ರಿಯಿಸಿದ ಅಧ್ಯಕ್ಷರು, ರೈತ ಸಭಾಭವನದ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಉದ್ಘಾಟನೆ ನಡೆಸಲಾಗುವುದು. ಈ ಬಗ್ಗೆ ಸೂಕ್ತ ದಿನ ನಿಗದಿ ಪಡಿಸಲಾಗುವುದು ಎಂದರು.